ADVERTISEMENT

‘ನಾಲ್ವಡಿ ಆಳ್ವಿಕೆ ಜ್ಞಾನೋದಯದ ಯುಗ’

​ಪ್ರಜಾವಾಣಿ ವಾರ್ತೆ
Published 4 ಜೂನ್ 2017, 19:30 IST
Last Updated 4 ಜೂನ್ 2017, 19:30 IST
ಭರತನಾಟ್ಯ ಕಲಾವಿದೆಯರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜೀವನ ಸಾಧನೆ ಕುರಿತ ಛಾಯಾಚಿತ್ರಗಳನ್ನು ವೀಕ್ಷಿಸಿದರು. –ಪ್ರಜಾವಾಣಿ ಚಿತ್ರ
ಭರತನಾಟ್ಯ ಕಲಾವಿದೆಯರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜೀವನ ಸಾಧನೆ ಕುರಿತ ಛಾಯಾಚಿತ್ರಗಳನ್ನು ವೀಕ್ಷಿಸಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆಯ ಕಾಲ ಜ್ಞಾನೋದಯದ ಯುಗವಾಗಿತ್ತು’ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ವಿ.ಎಂ.ರಮೇಶ್‌ ಬಣ್ಣಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು, ಎರಡನೇ ಮಹಾಯುದ್ಧ ಹಾಗೂ ರಾಷ್ಟ್ರೀಯ ಚಳವಳಿ ತೀವ್ರವಾಗಿದ್ದಂತಹ ಕಾಲಘಟ್ಟದಲ್ಲೂ ನಾಲ್ವಡಿ ಅವರು ಅತ್ಯುತ್ತಮ ಆಳ್ವಿಕೆಯನ್ನು ನೀಡಿದ್ದರು. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಶ್ರಮಿಸಿದ್ದರು. ಎಲ್ಲ ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣರಾದರು’ ಎಂದು ಹೇಳಿದರು.

ADVERTISEMENT

‘ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಅಡಿಗಲ್ಲು ಹಾಕಿದ್ದರು. ಮಹಿಳೆಯರಿಗೆ ಮತದಾನ, ವಿಕೇಂದ್ರೀಕರಣ, ಮೀಸಲಾತಿ ಸೌಲಭ್ಯ ಕಲ್ಪಿಸಿದ್ದರು. ಶಿಕ್ಷಣ ಎಲ್ಲ ಪ್ರಗತಿಗೆ ಮೂಲ. ಅದು ಅಂಧಕಾರವನ್ನು ಹೋಗಲಾಡಿಸುವ ಅಸ್ತ್ರ ಎಂದು ನಂಬಿದ್ದ ಅವರು, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ಒತ್ತು ನೀಡಿದ್ದರು’ ಎಂದರು.

‘ಕೆ.ಆರ್‌.ಎಸ್‌. ನಿರ್ಮಿಸುವ ಮೂಲಕ ಲಕ್ಷಾಂತರ ರೈತರ ಜೀವನಕ್ಕೆ ದಾರಿದೀಪವಾಗಿದ್ದರು. ಕೈಗಾರಿಕಾ ಕ್ಷೇತ್ರಕ್ಕೂ ಆದ್ಯತೆ ನೀಡಿದ್ದರು. ಅವರು ರೂಪಿಸಿದ ಆರ್ಥಿಕ ಯೋಜನೆಗಳೇ ಮುಂದೆ ಯೋಜನಾ ಆಯೋಗವಾಗಿ ರೂಪುಗೊಂಡಿದ್ದು, ಈಗ ನೀತಿ ಆಯೋಗವಾಗಿದೆ’ ಎಂದು ತಿಳಿಸಿದರು.

ಇಲಾಖೆಯ ನಿರ್ದೇಶಕಿ ಎಂ.ಎಸ್‌. ಅರ್ಚನಾ ಮಾತನಾಡಿ, ‘ನಾಲ್ವಡಿ ಅವರು 18ನೇ ವಯಸ್ಸಿನಲ್ಲಿ ಅಧಿಕೃತವಾಗಿ ರಾಜ್ಯಾಡಳಿತವನ್ನು ವಹಿಸಿಕೊಂಡು 38 ವರ್ಷಗಳ ಆಡಳಿತ ನಡೆಸಿದ್ದರು. 100 ವರ್ಷಗಳಲ್ಲಿ ಮಾಡುವಂತಹ ಕೆಲಸಗಳನ್ನು ಕಡಿಮೆ ಅವಧಿಯಲ್ಲಿ ಮಾಡಿದ್ದರು’ ಎಂದು ಬಣ್ಣಿಸಿದರು.

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಹಾಗೂ ಲಲಿತಕಲಾ ಅಕಾಡೆಮಿ ವತಿಯಿಂದ ಒಡೆಯರ್‌ ಅವರ ಜೀವನ ಸಾಧನೆಯ ವಿವಿಧ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಸೋಮನ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ತಮಟೆ ವಾದನದ ಕಲಾವಿದರು ಹಾಗೂ ನಾಗಭೂಷಣ್‌ ಮತ್ತು ತಂಡದವರು ನೀಡಿದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.