ಬೆಂಗಳೂರು: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯ ಕಾರಿನ ಮಾಜಿ ಚಾಲಕ ಲೆನಿನ್ ವಿರುದ್ಧ ರಾಮನಗರ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ದಾಖಲಾದ ದೂರಿಗೆ ತಡೆ ನೀಡಬೇಕೆ, ಬೇಡವೆ ಎಂಬುದಕ್ಕೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಲೆನಿನ್ ವಿರುದ್ಧ ನಿತ್ಯಾನಂದ ಸ್ವಾಮಿಯ ಭಕ್ತೆ ಅಂಜುಲಾ ಜಾಕ್ಸನ್ ದಾಖಲು ಮಾಡಿರುವ ದೂರು ಇದಾಗಿದೆ. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿಯ ಮೇಲೆ ಲೆನಿನ್ ವೃಥಾ ಆರೋಪ ಮಾಡಿದ್ದಾರೆ. ಮಹಿಳೆಯರ ಹೆಸರಿಗೆ ಕಳಂಕ ಬರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಇತ್ಯಾದಿಯಾಗಿ ಅಂಜುಲಾ ದೂರಿನಲ್ಲಿ ತಿಳಿಸಿದ್ದಾರೆ.
ಇದರ ರದ್ದತಿಗೆ ಲೆನಿನ್ ಹೈಕೋರ್ಟ್ ಅನ್ನು ಕೋರಿದ್ದಾರೆ. ‘ನನ್ನ ವಿರುದ್ಧ ಇರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ನಾನು ಸ್ವಾಮಿಯ ಭಕ್ತನಾಗಿದ್ದೆ. ರಾಸಲೀಲೆಯ ಸಿ.ಡಿಯನ್ನು ನೋಡಿ ದಿಗ್ಭ್ರಾಂತನಾದೆ. ಭಕ್ತರನ್ನು ರಕ್ಷಿಸಬೇಕು ಎನ್ನಿಸಿತು. ಅದಕ್ಕಾಗಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ಇದರಲ್ಲಿ ಯಾವ ರೀತಿಯ ಕಾನೂನು ಉಲ್ಲಂಘನೆಯೂ ಆಗಿಲ್ಲ’ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ಅವರು ವಿವಾದಕ್ಕೆ ಸಂಬಂಧಿಸಿದಂತೆ ವಾದ, ಪ್ರತಿವಾದಗಳನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.