ADVERTISEMENT

ನಿಧಿಗಾಗಿ ಪತ್ನಿ ಬಲಿಗೆ ಯತ್ನ; ಅರ್ಚಕ ಬಂಧನ

ಮಹಿಳಾ ಆಯೋಗಕ್ಕೆ ಮಾಹಿತಿ ನೀಡಿದ ಮಗಳು

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:30 IST
Last Updated 5 ಮೇ 2018, 19:30 IST

ಬೆಂಗಳೂರು: ನಿಧಿ ಆಸೆಗಾಗಿ 35 ವರ್ಷದ ಪತ್ನಿಯನ್ನು ಬಲಿ ಕೊಡಲು ಯತ್ನಿಸಿದ ಹಾಗೂ 17 ವರ್ಷಗಳ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ದೇವಾಲಯದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.

18 ವರ್ಷಗಳ ಹಿಂದೆ ಮದುವೆ ಆಗಿದ್ದ ಆ ಅರ್ಚಕನಿಗೆ ಮೂವರು ಮಕ್ಕಳಿದ್ದಾರೆ. ದೇವಾಲಯ ಬಳಿಯ ಮನೆಯೊಂದರಲ್ಲಿ ಅರ್ಚಕ ದಂಪತಿ ಮಕ್ಕಳ ಸಮೇತ ವಾಸವಿದ್ದರು. ತಂದೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಮಗಳು, ಮಹಿಳಾ ಆಯೋಗಕ್ಕೆ ಮಾಹಿತಿ ನೀಡಿದ್ದಳು. ಆಯೋಗದ ಅಧ್ಯಕ್ಷರು ಶನಿವಾರ ಅವರ ಮನೆಗೆ ಹೋಗಿ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ.

‘ಪತ್ನಿಯ ದೂರು ಹಾಗೂ ಮಗಳ ಹೇಳಿಕೆಯಂತೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದೇವೆ’ ಎಂದು ಬ್ಯಾಡರಹಳ್ಳಿ ಪೊಲೀಸರು ತಿಳಿಸಿದರು.

ADVERTISEMENT

‘ಆರೋಪಿಯು ನಿತ್ಯವೂ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದು, ಆಕೆಯ ದೇಹದ ಮೇಲೆ ಗಾಯದ ಗುರುತುಗಳಿವೆ. ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಅಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ. ಪತ್ನಿಯ ಆರೋಪಗಳ ಬಗ್ಗೆ ಆರೋಪಿಯಿಂದ ಮಾಹಿತಿ ಪಡೆದುಕೊಳ್ಳಬೇಕಿದೆ. ಹೀಗಾಗಿ, ಆತನನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಿದ್ದೇವೆ’ ಎಂದು ಹೇಳಿದರು.

ದೇವಾಲಯದ ಆವರಣದಲ್ಲೇ ಹೊಂಡ: ‘ಕೆಲ ತಿಂಗಳ ಹಿಂದಷ್ಟೇ ಪತಿಯನ್ನು ಭೇಟಿಯಾಗಿದ್ದ ಜ್ಯೋತಿಷಿಯೊಬ್ಬರು ದೇವಾಲಯದಲ್ಲಿ ನಿಧಿ ಇರುವುದಾಗಿ ಹೇಳಿದ್ದರು. ಅದು ಸಿಗಬೇಕಾದರೆ, ಕುಂಭ ರಾಶಿಯಲ್ಲಿ ಹುಟ್ಟಿದ ಮಹಿಳೆಯನ್ನು ಬಲಿ ಕೊಡಬೇಕು ಎಂದಿದ್ದರು’ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

‘ನನ್ನದು ಕುಂಭ ರಾಶಿ ಆಗಿದ್ದರಿಂದ, ನನ್ನನ್ನೇ ಬಲಿ ಕೊಡಲು ಪತಿ ಮುಂದಾಗಿದ್ದರು. ಅದಕ್ಕಾಗಿ ದೇವಾಲಯದ ಆವರಣದಲ್ಲಿ ಹೊಂಡವೊಂದನ್ನು ತೋಡಿದ್ದರು. ನನ್ನನ್ನು ಹೊಂಡದ ಬಳಿ ಕರೆದೊಯ್ದಿದ್ದ ಪತಿ, ಇಲ್ಲಿಯೇ ನಿನ್ನನ್ನು ಆಗಸ್ಟ್‌ನಲ್ಲಿ ಬಲಿ ಕೊಡುತ್ತೇನೆ. ಒಪ್ಪಿಕೊ ಎಂದು ಪೀಡಿಸಿದ್ದರು. ಅದಕ್ಕೆ ಒಪ್ಪಿರಲಿಲ್ಲ.’

‘ಅಂದಿನಿಂದ ನಿತ್ಯವೂ ಮನೆಯಲ್ಲಿ ಜಗಳ ಮಾಡಲು ಆರಂಭಿಸಿದ್ದರು. ಬಲಿ ಆಗುವವರೆಗೂ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದರು. ನನ್ನನ್ನು ಒಪ್ಪಿಸ
ಲೆಂದು, ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದ್ದರು. ನನ್ನ ಸಂಕಟ ನೋಡಲಾಗದೆ ಮಗಳೇ ಮಹಿಳಾ ಆಯೋಗಕ್ಕೆ ಮಾಹಿತಿ ನೀಡಿದ್ದಳು’ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಮಕ್ಕಳಿಗೆ ಮದ್ಯ ಕುಡಿಸುತ್ತಿದ್ದರು: ‘ಮದ್ಯವ್ಯಸನಿ ಆಗಿರುವ ಪತಿ, ನಿತ್ಯವೂ ಕುಡಿದೇ ಮನೆಗೆ ಬರುತ್ತಿದ್ದರು. ಮಕ್ಕಳಿಗೂ ಮದ್ಯ ಕುಡಿಸಲು ಯತ್ನಿಸುತ್ತಿದ್ದರು. ಆ ರೀತಿ ಮಾಡಬೇಡಿ ಎಂದರೆ, ನನ್ನ ಮೇಲೆಯೇ ಹಲ್ಲೆ ಮಾಡುತ್ತಿದ್ದರು’ ಎಂದು ಮಹಿಳೆ ಆರೋಪಿಸಿದ್ದಾರೆ.

‘ಮಕ್ಕಳ ಮೇಲೂ ಪತಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಅಕ್ಕ–ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದೆ. ಪತಿ ಅರ್ಚಕರಾಗಿರುವುದರಿಂದ, ಅವರ‍್ಯಾರೂ ನನ್ನ ಮಾತು ನಂಬಲಿಲ್ಲ’ ಎಂದಿದ್ದಾರೆ.

ದೇವರು ಬಂದವರಂತೆ ನಟನೆ: ‘ಅರ್ಚಕ ಆಗುವುದಕ್ಕೂ ಮುನ್ನ ಪತಿಯು ಖಾಸಗಿ ವಾಹನದ ಚಾಲಕರಾಗಿದ್ದರು.  ಮೈ ಮೇಲೆ ದೇವರು ಬಂದವರಂತೆ ನಟಿಸಿ ದೇವಾಲಯದ ಅರ್ಚಕರಾದರು’ ಎಂದು ಮಹಿಳೆ ಹೇಳಿದ್ದಾರೆ.

‘ಮನೆಯಲ್ಲೂ ದೇವರು ಬಂದಂತೆ ನಟಿಸುತ್ತಿದ್ದ ಅವರು, ‘ಬಲಿಯಾಗು’ ಎಂದು ಪದೇ ಪದೇ ಹೇಳುತ್ತಿದ್ದರು. ಅವರ ನಾಟಕ ಗೊತ್ತಿದ್ದರಿಂದ ಅದನ್ನು ನಂಬಲಿಲ್ಲ’ ಎಂದಿದ್ದಾರೆ.

‘ವೈಷಮ್ಯದಿಂದ ದೂರು’

ಆರೋಪಿಯನ್ನು ಬಂಧಿಸುತ್ತಿದ್ದಂತೆ ದೇವಾಲಯಕ್ಕೆ ಹೋಗಿ, ಸ್ಥಳೀಯರ ಹೇಳಿಕೆ ಪಡೆದುಕೊಂಡಿದ್ದೇವೆ. ‘ದಂಪತಿ ನಡುವೆ ಭಿನ್ನಾಭಿಪ್ರಾಯವಿದೆ. ಅವರಿಬ್ಬರು ನಿತ್ಯವೂ ಜಗಳವಾಡುತ್ತಿದ್ದರು. ಪತಿ ಮೇಲಿನ ವೈಷಮ್ಯದಿಂದಾಗಿ ಪತ್ನಿ ದೂರು ನೀಡಿದ್ದಾರೆ’ ಎಂದು ಸ್ಥಳೀಯರು ಹೇಳಿರುವುದಾಗಿ ಪೊಲೀಸರು ತಿಳಿಸಿದರು.

ಆರೋಪ ನಿರಾಕರಿಸಿರುವ ಅರ್ಚಕ, ‘ನಮ್ಮ ನಡುವೆ ಸಣ್ಣಪುಟ್ಟ ಜಗಳ ಆಗಿದೆ. ಆದರೆ, ನಿಧಿಗಾಗಿ ಪ‍ತ್ನಿಯನ್ನು ಬಲಿ ಕೊಡಲು ಪ್ರಯತ್ನಿಸಿದ್ದೆ ಎಂಬುದು ಸುಳ್ಳು’ ಎಂದಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ನಿಖರ ಮಾಹಿತಿ ಸಿಗಲಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.