ADVERTISEMENT

ನಿಮ್ಮದು ಜಾಥಾ, ನನ್ನದು ಬರೀ ನೋಟ..

7 ಸಾವಿರ ವಿದ್ಯಾರ್ಥಿಗಳು ಭಾಗಿ *ಬಾಲ್ಯ ವಿವಾಹ ತಡೆಗೆ ಬೃಹತ್‌ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2016, 19:56 IST
Last Updated 23 ಜನವರಿ 2016, 19:56 IST
ಕೊಪ್ಪಳದಲ್ಲಿ ಗವಿಮಠ, ಜಿಲ್ಲಾಡಳಿತ, ಯುನಿಸೆಫ್‌ ಆಶ್ರಯದಲ್ಲಿ ಬಾಲ್ಯವಿವಾಹ ತಡೆ ಸಂಬಂಧಿಸಿ ಜಾಗೃತಿ ಜಾಥಾ ನಡೆಯಿತು
ಕೊಪ್ಪಳದಲ್ಲಿ ಗವಿಮಠ, ಜಿಲ್ಲಾಡಳಿತ, ಯುನಿಸೆಫ್‌ ಆಶ್ರಯದಲ್ಲಿ ಬಾಲ್ಯವಿವಾಹ ತಡೆ ಸಂಬಂಧಿಸಿ ಜಾಗೃತಿ ಜಾಥಾ ನಡೆಯಿತು   

ಕೊಪ್ಪಳ: ಇಲ್ಲಿಯ ಗವಿಮಠದ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಶನಿವಾರ ಬಾಲ್ಯ ವಿವಾಹ ತಡೆ ಸಂಬಂಧಿಸಿ ಬೃಹತ್‌ ಜಾಗೃತಿ ಜಾಥಾ ನಡೆಯಿತು.

ಗವಿಮಠ, ಜಿಲ್ಲಾಡಳಿತ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ, ವಿವಿಧ ಇಲಾಖೆಗಳು ಹಾಗೂ ಹಲವು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಜಾಥಾದಲ್ಲಿ ನಗರದ ವಿವಿಧ ಶಿಕ್ಷಣ ಸಂಸ್ಥೆಗಳ 7 ಸಾವಿರಕ್ಕೂ ಅಧಿಕ  ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಳವಂಡಿ, ಹನುಮಸಾಗರದಲ್ಲಿಯೂ ವಿದ್ಯಾರ್ಥಿಗಳ ಜಾಥಾ ನಡೆಯಿತು.

ಜಾಥಾ ಬಳಿಕ ನಗರದ ಗವಿಮಠದ ಮೈದಾನದಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ‘ಬಾಲ್ಯ ವಿವಾಹದಂಥ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಅನಿಷ್ಟ ಪದ್ಧತಿ ವಿರುದ್ಧ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಜಾಗೃತಿ ನಡಿಗೆ ಜರುಗಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಈ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ದೊರೆತಿರುವುದು ಸಂತಸ ತಂದಿದೆ’ ಎಂದರು.

‘ದೇಶದ ಎಲ್ಲ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಕೊಪ್ಪಳ ಜಿಲ್ಲೆಯೇ ವೇದಿಕೆಯಾಗಲಿ. ಬಾಲ್ಯ ವಿವಾಹ  ಸಮಾಜದಲ್ಲಿ ಬೇರೂರಿರುವ ಅತ್ಯಂತ ಕೆಟ್ಟ ಪದ್ಧತಿ. ಅದನ್ನು ಎಲ್ಲರೂ ವಿರೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಂದೆ, ತಾಯಿಯರಿಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕು’ ಎಂದು ಸ್ವಾಮೀಜಿ ಕರೆ ನೀಡಿದರು.

ನಗರದ ಬನ್ನಿಕಟ್ಟೆ ಬಳಿಯ ಗೌರಿಶಂಕರ ದೇವಸ್ಥಾನದ ಬಳಿಯಿಂದ ಗವಿಮಠದ ವರೆಗೆ ಜಾಥಾ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.