ADVERTISEMENT

ನಿಯಮ ಉಲ್ಲಂಘಿಸಿಲ್ಲ- ಕೇಂದ್ರದ ವರದಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:15 IST
Last Updated 7 ಫೆಬ್ರುವರಿ 2011, 19:15 IST

ಬೆಂಗಳೂರು: ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ನಿಯಮ ಉಲ್ಲಂಘನೆಯ ಆರೋಪ ಹೊತ್ತಿದ್ದ ಉದ್ಯಮಿ ಆರ್.ಎನ್.ಶೆಟ್ಟಿ ಒಡೆತನದ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ದೇವಾಲಯ ಬಳಿಯ ಒಂಬತ್ತು ಕಟ್ಟಡಗಳನ್ನು ಹಾಗೇ ಉಳಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಸಮುದ್ರ ತಟದ ಮೇಲೆ ನಿರ್ಮಾಣ ಆಗಿರುವ ಹೋಟೆಲ್ ‘ನವೀನ್ ಬೀಚ್ ರೆಸಾರ್ಟ್, ಸುಮಾರು 123 ಅಡಿ ಅಳತೆಯ ಬೃಹದಾಕಾರದ ಶಿವನ ಮೂರ್ತಿ, ಮೂರು ಮಹಡಿಯ ವಸತಿ ಗೃಹಗಳು ಹಾಗೂ ಮಹಾರಾಜ ಗೋಪುರಗಳನ್ನು ನಿಯಮಾನುಸಾರವೇ ಕಟ್ಟಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಅದನ್ನು ಸೋಮವಾರ ಹೈಕೋರ್ಟ್ ಮುಂದಿಡಲಾಯಿತು. ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣವಾಗಿದ್ದು, ಅವುಗಳನ್ನು ನೆಲಸಮ ಮಾಡಲು ಆದೇಶಿಸುವಂತೆ ಕೋರಿ 2000ನೇ ಸಾಲಿನಲ್ಲಿ ಕೆಲ ಸ್ಥಳೀಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವಾಗ, ಹೈಕೋರ್ಟ್ ಕೇಂದ್ರ ಸರ್ಕಾರದ ಸಮಿತಿ ರಚನೆ ಮಾಡಿ ಆರೋಪದ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಹೇಳಿತ್ತು. ಸಮಿತಿ ವರದಿ ಆಧಾರದ ಮೇಲೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಕೇಹರ್ ನೇತೃತ್ವದ ವಿಭಾಗೀಯ ಪೀಠ ಅರ್ಜಿ ಇತ್ಯರ್ಥಗೊಳಿಸಿತು.

ಮತ್ತೊಂದು ವಿವಾದ
 ಈ ವಿವಾದ ಇತ್ಯರ್ಥಗೊಳ್ಳುವ ಮುಂಚೆಯೇ, ಹೋಟೆಲ್ ‘ನವೀನ್ ಬೀಚ್ ರೆಸಾರ್ಟ್’ಗೆ ಸಂಬಂಧಿಸಿದಂತೆ ಇನ್ನೊಂದು ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದು, ವಿಚಾರಣೆಯನ್ನು ಪೀಠ ಮುಂದೂಡಿದೆ.

‘ನಾಗರಿಕ ಸೇವಾ ಟ್ರಸ್ಟ್’ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಹೋಟೆಲ್ ನಿರ್ಮಾಣಕ್ಕೆ ಭೂ ಮಂಜೂರು ಮಾಡಿರುವುದನ್ನೇ ಪ್ರಶ್ನಿಸಿದೆ. ಕಾಯ್ದೆ, ಕಾನೂನು ಗಾಳಿಗೆ ತೂರಿ ಭೂಮಿಯನ್ನು ಮಂಜೂರು ಮಾಡಲಾಗಿದೆ ಎನ್ನುವುದು ಟ್ರಸ್ಟ್ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.