ADVERTISEMENT

ನಿಯಮ ಪಾಲನೆಯಾಗುತ್ತಿಲ್ಲ: ಆರೋಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ಬೆಂಗಳೂರು:  ನಗರದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೊಳವೆಬಾವಿಗಳನ್ನು ಕೊರೆಯಲು ಜಲಮಂಡಳಿ ಅನುಮತಿ ಪಡೆದು ಶುಲ್ಕ ಪಾವತಿಸಬೇಕೆಂಬ ನಿಯಮ ಸರ್ಕಾರ ಜಾರಿ ಮಾಡಿದ್ದರೂ, ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಇನ್ನು ಕೊಳವೆ ಬಾವಿ ಕೊರೆಯುವುದಕ್ಕೆ ವಿಧಿಸಲಾಗುವ ಶುಲ್ಕ 50 ರೂಪಾಯಿ ಮಾತ್ರ. ಕರ್ನಾಟಕ ಗೆಜೆಟ್ ಸೆಪ್ಟೆಂಬರ್ 6, 2012ರ ಪ್ರಕಾರ ನೋಂದಣಿಯಾದ ಏಜೆನ್ಸಿಗಳು ಮಾತ್ರ ಕೊಳವೆ ಬಾವಿಗಳನ್ನು ಕೊರೆಯಲು ಅವಕಾಶವಿದ್ದು, ಈಗಾಗಲೇ ಯಥೇಚ್ಛವಾಗಿ ಕೊಳವೆಬಾವಿಗಳು ಅಸ್ತಿತ್ವದಲ್ಲಿರುವ ಕಡೆ ಯಾವುದೇ ರೀತಿಯಲ್ಲೂ ಕೊಳವೆ ಬಾವಿಯನ್ನು ಕೊರೆಯಲು ಅವಕಾಶವನ್ನು ನಿರ್ಬಂಧಿಸಲಾಗಿದೆ.  ಕರ್ನಾಟಕ ಅಂತರ್ಜಲ ಪ್ರಾಧಿಕಾರದ ನಿಯಮಾವಳಿ ಪ್ರಕಾರ ಜಲಮಂಡಳಿಯಿಂದ ಅನುಮತಿ ಪಡೆಯದೇ ಕೊಳವೆ ಬಾವಿಗಳನ್ನು ಕೊರೆಯುವ ಏಜೆನ್ಸಿಗಳಿಗೆ ಸೆರೆವಾಸದೊಂದಿಗೆ ರೂ 2 ರಿಂದ 10 ಸಾವಿರ  ದಂಡ ವಿಧಿಸಲಾಗುವುದು. ಭೂತಜ್ಞ ಪ್ರಮಾಣೀಕರಿಸಿದಂತೆ ಕೊಳವೆ ಬಾವಿ ನೀರಿನ ಪ್ರಮಾಣ ತಗ್ಗಿಸುವ ಪ್ರದೇಶಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ತೆರೆಯುವ ಅವಕಾಶ ನಿರಾಕರಿಸಲಾಗುವುದು.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಹಿರಿಯ ಜಲಮಂಡಳಿ ಅಧಿಕಾರಿ, `ಕೆಲವು ಅತ್ಯವಶ್ಯಕ ನಿಯಮಗಳು ಸೂಕ್ತ ಸಮಯದಲ್ಲಿ ಜಾರಿಯಾಗುವುದಿಲ್ಲ. ಕೊಳವೆ ಬಾವಿ ಕೊರೆಯುವ ಏಜೆನ್ಸಿಗಳಿಗೆ ಈ ನಿಯಮದ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಇನ್ನು ಕೆಲವರು ನಿಯಮ ಜಾರಿಯಾಗುವ ಮೊದಲೇ ಕೊಳವೆ ಬಾವಿ ಕೊರೆದು ಹಣ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ' ಎಂದರು.

`ಜಾರಿಗೆ ವರ್ಷ ಬೇಕು'
ರಾಜ್ಯ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ 2009ರಲ್ಲೇ ಅಂತರ್ಜಲ ಕುಸಿಯುತ್ತಿರುವ ಬಗ್ಗೆ ವರದಿ ಮಾಡಿ ಸರ್ಕಾರಕ್ಕೆ ಸಲ್ಲಿಸಿತ್ತು. ರಾಜ್ಯ ಸರ್ಕಾರ ಕೊಳವೆ ಬಾವಿ ನಿಯಮಗಳ ಕರಡನ್ನು ರೂಪಿಸಿ  16 ವರ್ಷಗಳ ನಂತರ ಜಾರಿಗೊಳಿಸಿದೆ. ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇನ್ನು ಒಂದು ವರ್ಷ ಬೇಕಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT