ADVERTISEMENT

ನಿರ್ಮಾಣ ಅಕಾಡೆಮಿ ಸ್ಥಾಪನೆ:ಸಿ.ಎಂ ಇಂಗಿತ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 20:15 IST
Last Updated 21 ಜನವರಿ 2012, 20:15 IST

ಬೆಂಗಳೂರು: ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿರುವ ಕಾರ್ಮಿಕರು ಮತ್ತಿತರ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವ ದೃಷ್ಟಿಯಿಂದ ರಾಜ್ಯದಲ್ಲಿ `ನಿರ್ಮಾಣ ಅಕಾಡೆಮಿ~ ಸ್ಥಾಪಿಸುವ ಇಂಗಿತವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ವ್ಯಕ್ತಪಡಿಸಿದರು.

12ನೇ ಪಂಚವಾರ್ಷಿಕ ಯೋಜನೆಯಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳಿಗೆ ಸಂಬಂಧಿಸಿದಂತೆ ನಗರದಲ್ಲಿ ನಡೆದ ಎರಡು ದಿನಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ತಜ್ಞರ ತಂಡ ಮತ್ತು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ ಅವರು ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದರು.

ಕಾಮಗಾರಿ ಗುಣನಿಯಂತ್ರಣ ಕಾರ್ಯಪಡೆಯ ಆಶ್ರಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಚರ್ಚೆಗೆ ಬಂದ ವಿಷಯಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಕಾರ್ಮಿಕರಿಗೆ ತರಬೇತಿ ನೀಡಲು ಅಕಾಡೆಮಿ ಸ್ಥಾಪಿಸಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ್ದು, ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ ಎಂದು ರಾಮಚಂದ್ರಗೌಡ ತಿಳಿಸಿದರು.

ಅಕಾಡೆಮಿಯಲ್ಲಿ ಕಾಯಂ ಆಗಿ ಮುಖ್ಯ ಎಂಜಿನಿಯರ್ ಇರುತ್ತಾರೆ.ನಿರ್ಮಾಣ ಕ್ಷೇತ್ರದ ಕಾಮಗಾರಿಗಳ ಗುಣಮಟ್ಟ ಉತ್ತಮವಾಗಿರುವಂತೆ ನೋಡಿಕೊಳ್ಳುವುದು ಇವರ ಜವಾಬ್ದಾರಿಯಾಗಿರುತ್ತದೆ. ಅಕಾಡೆಮಿಗೆ ಬೇಕಾದ ಹಣ ಮತ್ತು ಜಾಗವನ್ನು ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರಕಟಿಸುವ ಸಂಭವವಿದೆ ಎಂದರು.

ಶಾಸಕರ ಗೈರು: ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ 18 ಶಾಸಕರ ಸಲಹೆಗಳನ್ನು ಪಡೆಯುವ ಉದ್ದೇಶದಿಂದ ಶುಕ್ರವಾರದ ಕಾರ್ಯಾಗಾರಕ್ಕೆ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಬಿ.ಎನ್.ವಿಜಯಕುಮಾರ್, ಪಿ.ಎಂ.ನರೇಂದ್ರಸ್ವಾಮಿ, ಶಶಿಲ್ ನಮೋಶಿ ಮಾತ್ರ ಭಾಗವಹಿಸಿದ್ದರು.

ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ ಕಾರ್ಯಾಗಾರ ಉದ್ಘಾಟಿಸಿದರು. ತಜ್ಞರ ತಂಡದ ಸಂಚಾಲಕ ಪಿ.ಆರ್.ಸ್ವರೂಪ್, ಗುಣನಿಯಂತ್ರಣ ಕಾರ್ಯಪಡೆ ಸದಸ್ಯ ಕಾರ್ಯದರ್ಶಿ ಐ.ರವೀಂದ್ರನಾಥ್ ಸೇರಿದಂತೆ ಎಂಜಿನಿಯರ್‌ಗಳು, ಬಿಲ್ಡರ್‌ಗಳು, ನಿರ್ಮಾಣ ಕ್ಷೇತ್ರದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.