ADVERTISEMENT

ನಿವೃತ್ತಿ ವಯೋಮಿತಿ ಏರಿಕೆ: ಮನವಿ ಪುರಸ್ಕರಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ವಯಸ್ಸನ್ನು 58 ರಿಂದ 60ಕ್ಕೆ ಏರಿಸುವ ಸಂಬಂಧ ಸಿಬ್ಬಂದಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಮಂಗಳವಾರ ಆದೇಶಿಸಿದೆ.

ಪಿ.ಎನ್.ಬಸವರಾಜು ಹಾಗೂ ಇತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಈ ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಕಾಯ್ದೆಯ ಅನುಸಾರ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಸಿಬ್ಬಂದಿಗೆ ಒಂದೇ ತರನಾದ ವೇತನ, ನೇಮಕಾತಿ ಪ್ರಕ್ರಿಯೆ ಎಲ್ಲವೂ ಇದೆ. ಆದರೆ ತಮಗೆ ಮಾತ್ರ ನಿವೃತ್ತಿ ವಯಸ್ಸು ಏರಿಕೆ ಮಾಡಿಲ್ಲ ಎನ್ನುವುದು ಅವರ ವಾದ.

ಪೆಟ್ರೋಲ್ ಬಂಕ್‌ಗೆ ಜಾಗ ವಿವಾದ: ಕಲ್ಯಾಣನಗರದ ಎಚ್‌ಆರ್‌ಬಿಆರ್ ಲೇಔಟ್‌ನ 3ನೇ ಬ್ಲಾಕ್ ಬಳಿ 2006ರಲ್ಲಿ ನಿರ್ಮಾಣಗೊಂಡಿರುವ ಪೆಟ್ರೊಲ್ ಬಂಕ್ `ಭವಿಷ್ಯ~ ಇನ್ನು ಮೂರು ತಿಂಗಳಿನಲ್ಲಿ ನಿರ್ಧಾರವಾಗಲಿದೆ. ಕಾರಣ, ಬ್ಯಾಂಕ್ ಹಾಗೂ ಉದ್ಯಾನಕ್ಕೆ ಮೀಸಲು ಇರಿಸಿರುವ ಜಾಗದಲ್ಲಿ ಇದನ್ನು ನಿರ್ಮಾಣ ಮಾಡಿರುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.
 
ಈ ಆದೇಶವನ್ನು ಸಂಬಂಧಿತ ಕೋರ್ಟ್ ಮುಂದೆ ಪ್ರಶ್ನಿಸಲು ಪೆಟ್ರೋಲ್ ಬಂಕ್ ಮಾಲೀಕ ಪುರುಷೋತ್ತಮ ಅವರು ಬಯಸಿರುವ ಹಿನ್ನೆಲೆಯಲ್ಲಿ, ತನ್ನ ಆದೇಶವನ್ನು ಹೈಕೋರ್ಟ್ ಮೂರು ತಿಂಗಳ ಮಟ್ಟಿಗೆ ಅಮಾನತಿನಲ್ಲಿ ಇಟ್ಟಿದೆ.

ಆದರೆ ಈ ಅವಧಿಯ ಒಳಗೆ ಬೇರೆ ಯಾವುದೇ ಕೋರ್ಟ್‌ಗಳಿಂದ ಆದೇಶ ಪಡೆಯುವಲ್ಲಿ ಮಾಲೀಕರು ವಿಫಲರಾದರೆ ಈ ಜಾಗವನ್ನು ಮೊದಲಿನ ಸ್ಥಿತಿಗೇ ತರುವಂತೆ (ಬ್ಯಾಂಕ್ ಹಾಗೂ ಉದ್ಯಾನಕ್ಕೆ ಮೀಸಲು ಇರಿಸುವಂತೆ) ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.  ಪೆಟ್ರೋಲ್ ಬಂಕ್‌ಗೆ ಜಾಗ ನೀಡಿರುವ ಕ್ರಮ ಪ್ರಶ್ನಿಸಿ ಸುಬ್ರಹ್ಮಣ್ಯ ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾ. ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಸ್ತುಸ್ಥಿತಿಗೆ ಆದೇಶ: ಆರ್ಥಿಕವಾಗಿ ಹಿಂದುಳಿದವರಿಗಾಗಿ ಈಜಿಪುರದ ಬಳಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ವಸ್ತುಸ್ಥಿತಿ ಕುರಿತು ಎರಡು ವಾರಗಳಲ್ಲಿ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಈ ಕಟ್ಟಡದ ಅಡಿಪಾಯ ಸರಿಯಿಲ್ಲ ಎಂಬ ಕುರಿತು `ಟಾರ್‌ಸ್ಟೀಲ್ ಸಂಶೋಧನಾ ಸಂಸ್ಥೆ~ ವರದಿ ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿ ರಮಾದೇವಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾ. ಕೇಹರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಎಪಿಎಂಸಿಗೆ ಜಾಗ- ಊರ್ಜಿತ: ಆನೇಕಲ್‌ನ ಸರ್ಜಾಪುರ ಹೋಬಳಿಯ ಗೂಳಿಮಂಗಲದ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆ ಮಾರಾಟ ಸಮಿತಿಗೆ (ಎಪಿಎಂಸಿ) ಜಾಗ ಮಂಜೂರು ಮಾಡಿ ಹೊರಡಿಸಲಾದ 2002ರ ಮೇ ತಿಂಗಳ ಪ್ರಾಥಮಿಕ ಹಾಗೂ 2003ರ ಆಗಸ್ಟ್ ಅಂತಿಮ ಅಧಿಸೂಚನೆಯನ್ನು ಹೈಕೋರ್ಟ್ ಊರ್ಜಿತಗೊಳಿಸಿದೆ. ಈ ಅಧಿಸೂಚನೆಯನ್ನು ಹಲವು ಭೂಮಾಲೀಕರು ಪ್ರಶ್ನಿಸಿದ್ದರು.

ಅವರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ. ಆದರೆ ಅರ್ಜಿದಾರ ಭೂಮಾಲೀಕರಿಗೆ ಭೂಮಿ ಸ್ವಾಧೀನಪಡಿಸಿಕೊಂಡ ದಿನಕ್ಕೆ ಅನ್ವಯ ಆಗುವಂತೆ (2010ರ ಅಕ್ಟೋಬರ್) ಅಂದಿನ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡುವಂತೆ ಪೀಠ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.