ADVERTISEMENT

ನಿವೃತ್ತ ನ್ಯಾಯಮೂರ್ತಿ ಮನೆಯಲ್ಲಿ ಬೆಳ್ಳಿ ವಿಗ್ರಹ ಕಳವು

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಬೆಂಗಳೂರು: ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿ. ಶಿವರಾಜ್ ಪಾಟೀಲ್ ಅವರ ಮನೆಯ ಹಿಂಬಾಗಿಲು ಮುರಿದು ಒಳಗೆ ನುಗ್ಗಿದ ದುಷ್ಕರ್ಮಿಗಳು ಸುಮಾರು ಆರು ಕೆ.ಜಿ. ತೂಕದ ಬೆಳ್ಳಿ ವಿಗ್ರಹಗಳು ಮತ್ತು ವಸ್ತುಗಳನ್ನು ಕಳವು ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಸದಾಶಿವನಗರದ ಏಳನೇ ಮುಖ್ಯ ರಸ್ತೆಯ ಹದಿನೆಂಟನೇ ತಿರುವಿನಲ್ಲಿ ಶಿವರಾಜ್ ಪಾಟೀಲ್ ಅವರ ಮನೆ ಇದೆ. ರಾತ್ರಿ ಮನೆಯಲ್ಲಿ ಪಾಟೀಲ್ ಅವರೂ ಇದ್ದರು. ಎಲ್ಲರೂ ಮಲಗಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಹಿಂದಿನ ಬಾಗಿಲನ್ನು ಮೀಟಿ ಒಳಗೆ ನುಗ್ಗಿದ ಕಳ್ಳರು ದೇವರ ಮನೆಯಲ್ಲಿದ್ದ ಬೆಳ್ಳಿ ಮೂರ್ತಿಗಳು ಮತ್ತು ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವರಾಜ್ ಪಾಟೀಲ್ ಅವರ ಸೊಸೆ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದಾಗ ಕಳವಾಗಿದ್ದು ಗೊತ್ತಾಗಿದೆ. ಮನೆಗೆ ಕಾವಲುಗಾರನನ್ನು ನೇಮಿಸಲಾಗಿದೆ. ಆದರೆ ಆತ ಮನೆಯ ಮುಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸದಾಶಿವನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸರ ದೋಚಿ ಪರಾರಿ
ನಗರದ ಸಂಪಿಗೆಹಳ್ಳಿ ಮತ್ತು ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಇಬ್ಬರು ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಸಂಜೆ ನಡೆದುಕೊಂಡು ಹೋಗುತ್ತಿದ್ದ ಸುಶೀಲಮ್ಮ ಎಂಬುವರನ್ನು ತಡೆದ ಇಬ್ಬರು ಅಪರಿಚಿತರು ತಾವು ಸಿಬಿಐ ಅಧಿಕಾರಿಗಳೆಂದು ಹೇಳಿದ್ದಾರೆ. ಮುಂದೆ ದೊಡ್ಡ ಗಲಾಟೆ ಆಗುತ್ತಿದ್ದು ಚಿನ್ನದ ಸರವನ್ನು ಬಿಚ್ಚಿಟ್ಟುಕೊಳ್ಳಿ ಎಂದು ಹೆದರಿಸಿದ್ದಾರೆ.

ಇದನ್ನು ನಂಬಿದ ಸುಶೀಲಮ್ಮ ಅವರು ಸರ ಬಿಚ್ಚಿದ ನಂತರ ಅದನ್ನು ಪಡೆದು ಪೇಪರ್‌ನಲ್ಲಿ ಸುತ್ತಿದಂತೆ ನಾಟಕ ಮಾಡಿ ಬರೀ ಪೇಪರ್ ಅನ್ನು ಪರ್ಸ್‌ನಲ್ಲಿಟ್ಟು ಸರದೊಂದಿಗೆ ಪರಾರಿಯಾಗಿದ್ದಾರೆ. ಸರ ಮೂವತ್ತೆರಡು ಗ್ರಾಂ ತೂಕದ್ದು ಎಂದು ಸಂಪಿಗೆಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ಯುವಕರು ಮತ್ತು ಬೈಕ್‌ನಲ್ಲಿ ಬಂದಿದ್ದರು ಎಂದು ಸುಶೀಲಮ್ಮ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದಾಶಿವನಗರ:
ಇದೇ ರೀತಿ ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಭಾಗ್ಯಲಕ್ಷ್ಮಿ ಎಂಬುವರ ಚಿನ್ನದ ಸರವನ್ನು ದುಷ್ಕರ್ಮಿಗಳು ದೋಚಿದ ಘಟನೆ ಸದಾಶಿವನಗರದ ಭಾಷ್ಯಂ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಮುಂದೆ ದೊಡ್ಡ ಜಗಳವಾಗುತ್ತಿದೆ. ಆದ್ದರಿಂದ ಸರವನ್ನು ಬಿಚ್ಚಿಟ್ಟುಕೊಳ್ಳಿ ಎಂದು ಹೇಳಿದ ಅವರು ಸರವನ್ನು ಪರ್ಸ್‌ನಲ್ಲಿಟ್ಟಂತೆ ನಾಟಕ ಮಾಡಿ ಪರಾರಿಯಾಗಿದ್ದಾರೆ. ಸರ ಮೂವತ್ತು ಗ್ರಾಂ ತೂಕದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಸಾವು

ಬೈಕ್‌ಗೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿ ನಡೆದಿದೆ. ಸತೀಶ್ (26) ಮೃತಪಟ್ಟವರು.

ಉಷಾ ಎಂಬುವರನ್ನು ವಿವಾಹವಾಗಿದ್ದ ಅವರು ವೀವರ್ಸ್‌ ಕಾಲೊನಿಯಲ್ಲಿ ನೆಲೆಸಿದ್ದರು. ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಅವರು ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಮುಂಭಾಗದಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.


ತಲೆಗೆ ತೀವ್ರ ಪೆಟ್ಟಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಸತೀಶ್ ಮೃತಪಟ್ಟರು. ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೈಕೊಲೇಔಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ಖಂಡಿಸಿ ಪತ್ರಕರ್ತರ ಜಾಥಾ

ವಕೀಲರಿಂದ ಮಾಧ್ಯಮದವರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆಯನ್ನು ಖಂಡಿಸಿ ಹಲವು ಪತ್ರಕರ್ತರ ಸಂಘಗಳು ಶನಿವಾರ ಪ್ರೆಸ್ ಕ್ಲಬ್‌ನಿಂದ ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆವರೆಗೆ ಪ್ರತಿಭಟನಾ ಜಾಥಾ ನಡೆಸಿದರು.

ವಕೀಲರು ಮಾಧ್ಯಮದವರ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಹಲ್ಲೆಗೊಳಗಾದ ಮಾಧ್ಯಮ ಪ್ರತಿನಿಧಿಗಳಿಗೆ ವಕೀಲರೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಭಿತ್ತಿಪತ್ರ ಹಾಗೂ ಬ್ಯಾನರ್ ಹಿಡಿದು ವಕೀಲರ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ ಪತ್ರಕರ್ತರ ನಿಯೋಗ ರಾಜ್ಯಪಾಲ ಹಂಸರಾಜ ಭಾರದ್ವಾಜ್, ಗೃಹ ಸಚಿವ ಆರ್. ಅಶೋಕ್ ಹಾಗೂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಸಲ್ಲಿಸಿ ಗೂಂಡಾವರ್ತನೆ ತೋರಿದ ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.