ADVERTISEMENT

ನಿವೃತ್ತ ಶಿಕ್ಷಕರು, ಪೊಲೀಸರಿಗೆ ಉಚಿತ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಬೆಂಗಳೂರು: ಸ್ಪರ್ಶ ಆಸ್ಪತ್ರೆಯ ದತ್ತಿ ಸಂಸ್ಥೆಯಾದ `ಸ್ಪರ್ಶ ಪ್ರತಿಷ್ಠಾನ~ವು ತನ್ನ ಮೂರನೇ ವರ್ಷದ `ಗುರು ನಮನ~ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರ ಜತೆ ನಿವೃತ್ತ ಪೊಲೀಸರಿಗೂ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಲಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸ್ಪರ್ಶ ಆಸ್ಪತ್ರೆಯ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ್, `ಶಿಕ್ಷಕರ ದಿನಾಚರಣೆ ಅಂಗವಾಗಿ 2010 ಮತ್ತು 2011ರಲ್ಲಿ ವರ್ಷಕ್ಕೆ ನೂರು ಮಂದಿಯಂತೆ ಒಟ್ಟು 200 ಮಂದಿ ನಿವೃತ್ತ ಶಿಕ್ಷಕರಿಗೆ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಈ ಬಾರಿ ನಿವೃತ್ತ ಗುರು ನಮನ ಕಾರ್ಯಕ್ರಮದ ವ್ಯಾಪ್ತಿಗೆ ನಿವೃತ್ತ ಪೊಲೀಸರನ್ನು ಸೇರಿಸುತ್ತಿದ್ದೇವೆ~ ಎಂದರು.

`ಉಚಿತ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಗಸ್ಟ್ 2ರಿಂದ 4ರವರೆಗೆ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ನಗರದ ಇನ್‌ಫೆಂಟ್ರಿ ರಸ್ತೆಯ ಸ್ಪರ್ಶ ಆಸ್ಪತ್ರೆ ಆವರಣದಲ್ಲಿ ತಪಾಸಣಾ ಶಿಬಿರ ನಡೆಯಲಿದೆ. ತಪಾಸಣೆಗೆ ಒಳಪಡಲಿಚ್ಛಿಸುವವರು ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಣಿ ಮತ್ತು ವಿವರಗಳಿಗೆ ಮೊಬೈಲ್: 9980020658, 9008475000 ಅನ್ನು ಸಂಪರ್ಕಿಸಬೇಕು. ವೆಬ್‌ಸೈಟ್ ವಿಳಾಸ:www.sparshhospitals.com’ ಎಂದು ಅವರು ಹೇಳಿದರು.

`ಒಬ್ಬರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲು ಒಂದೂವರೆ ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಗುರು ನಮನ ಕಾರ್ಯಕ್ರಮದಲ್ಲಿ 100 ಮಂದಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸುತ್ತಿದ್ದೇವೆ. ಇದಕ್ಕಾಗಿ ಒಂದು ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು, ದಾನಿಗಳು ಉದಾರವಾಗಿ ದೇಣಿಗೆ ನೀಡಲು ಕೋರುತ್ತಿದ್ದೇವೆ. ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80ಜಿ ಪ್ರಕಾರ ತೆರಿಗೆ ವಿನಾಯಿತಿ ಸಿಗಲಿದೆ~ ಎಂದು ಅವರು ತಿಳಿಸಿದರು.

`ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾ ದೇಶಗಳ ತಜ್ಞರು ಹಾಗೂ ಹೈದರಾಬಾದ್, ಚೆನ್ನೈ, ಅಹಮದಾಬಾದ್‌ನ ವೈದ್ಯರು ಸೇರಿದಂತೆ ಒಟ್ಟು 14 ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ಮಾಡಲಿದ್ದಾರೆ~ ಎಂದು ಹೇಳಿದ ಅವರು, `ಕೀಲು ನೋವಿನಿಂದ ಬಳಲುತ್ತಿರುವ ನಿವೃತ್ತ ಶಿಕ್ಷಕರು ಮತ್ತು ಪೊಲೀಸರು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಗುರುತಿನ ಪುರಾವೆ, ಹಿಂದಿನ ವೈದ್ಯಕೀಯ ದಾಖಾಲತಿಗಳೊಂದಿಗೆ ತಪಾಸಣಾ ಶಿಬಿರಕ್ಕೆ ಬರಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.