ಬೆಂಗಳೂರು: ರಾಮಮೂರ್ತಿನಗರ ಸಮೀಪದ ಬಿ.ಚನ್ನಸಂದ್ರದಲ್ಲಿ ಭಾನುವಾರ ಮಧ್ಯಾಹ್ನ ನಿತಿನ್ ಎಂಬ ಆರು ವರ್ಷದ ಬಾಲಕ ನೀರಿನ ತೊಟ್ಟಿಗೆ (ಸಂಪ್) ಬಿದ್ದು ಸಾವನ್ನಪ್ಪಿದ್ದಾನೆ.
ಚನ್ನಸಂದ್ರ ಮೂರನೇ ಅಡ್ಡರಸ್ತೆಯಲ್ಲಿ ವಾಸವಿರುವ ಆಂಧ್ರಪ್ರದೇಶ ಮೂಲದ ಸುಬ್ರಮಣಿ ಮತ್ತು ಅನಿತಾ ದಂಪತಿಯ ಮಗನಾದ ನಿತಿನ್ ಮನೆಯ ಸಮೀಪದ ಶಾಲೆಯೊಂದರಲ್ಲಿ ಎಲ್‌ಕೆಜಿ ಓದುತ್ತಿದ್ದ.
ಕೂಲಿ ಕಾರ್ಮಿಕರಾದ ಸುಬ್ರಮಣಿ ದಂಪತಿ ಮಗನನ್ನು ಪಕ್ಕದ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಸಮೀಪದಲ್ಲೇ ಇದ್ದ ಸಂಪ್‌ಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾನೆ. ಸಂಜೆ ಆರು ಗಂಟೆ ಸುಮಾರಿಗೆ ಮನೆಗೆ ಬಂದ ಪೋಷಕರು ಮಗನಿಗಾಗಿ ಎಲ್ಲೆಡೆ ಹುಡುಕಾಡುತ್ತಿದ್ದಾಗ ಸಂಪ್‌ನಲ್ಲಿ ನಿತಿನ್‌ನ ಶವ ಪತ್ತೆಯಾಗಿದೆ ಎಂದು ರಾಮಮೂರ್ತಿನಗರ ಪೊಲೀಸರು ತಿಳಿಸಿದ್ದಾರೆ.
ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಧನ: ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್. ಪುರದ ರಾಜೇಶ್‌ಕುಮಾರ್ ಗುಪ್ತಾ (38), ಮಹೇಶ್ (39), ಬಾಲಾಜಿ ಲೇಔಟ್‌ನ ಕಮಲೇಶ್ ಯಾದವ್ (45), ದೊಡ್ಡಬೊಮ್ಮಸಂದ್ರದ ದೀಪುರಾಜ್ (29) ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಿರೀಶ್ (30) ಬಂಧಿತರು.
ಆರೋಪಿಗಳು ಮುಂಬೈ ಮತ್ತು ಕೋಲ್ಕತ್ತದಿಂದ ಯುವತಿಯರನ್ನು ನಗರಕ್ಕೆ ಕರೆದುಕೊಂಡು ಬಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಅಲ್ಲದೇ ಬಾರ್ ಮತ್ತು ಪಬ್‌ಗಳಲ್ಲಿನ ಬಾರ್ ಗರ್ಲ್ಸ್ ಕೆಲಸಕ್ಕೆ ಯುವತಿಯರನ್ನು ಪೂರೈಸುತ್ತಿದ್ದರು. ಈ ದಂಧೆಯಿಂದ ಬಂದ ಹಣದಲ್ಲಿ ಅವರು ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.