ADVERTISEMENT

ನೀರು ಪೂರೈಕೆ: ಹಣದ ಕೊರತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕಾಮಗಾರಿಗಳ ಅನುಷ್ಠಾನಗೊಳಿಸಲು ಹಣದ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎನ್. ಬಚ್ಚೇಗೌಡ ಸ್ಪಷ್ಟಪಡಿಸಿದರು.

ಬರ ಪರಿಹಾರ ಕಾಮಗಾರಿಗಳ ಪರಿಶೀಲನೆಗಾಗಿ ಸೇರಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಜಿಲ್ಲೆಯಲ್ಲಿ ಒಂದು ಟ್ಯಾಂಕರ್ ನೀರಿಗೆ ರೂ. 250 ನೀಡಿ ಖರೀದಿಸಲಾಗುತ್ತಿದೆ. ಬಹುತೇಕ ಟ್ಯಾಂಕರ್ ಮಾಲೀಕರು ಈ ದರವನ್ನು ಒಪ್ಪುತ್ತಿಲ್ಲ. ಆದಕಾರಣ, ಎಲ್ಲಾ ಗ್ರಾಮಗಳಿಗೆ ಸಕಾಲದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ~ ಎಂಬ ಅಧಿಕಾರಿಗಳ ಉತ್ತರಕ್ಕೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

`ಬಾರದ ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡು, ಅವುಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಆದೇಶಿಸಿ~ ಎಂದು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ ಸಚಿವರು, `ವಶಪಡಿಸಿಕೊಂಡ ಟ್ಯಾಂಕರ್‌ಗಳನ್ನು ಕುಡಿಯುವ ನೀರು ಸರಬರಾಜಿಗೆ ಬಳಸಿ~ ಎಂದು ಸಲಹೆ ನೀಡಿದರು.

`ಬರಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು ಕೆಲವೆಡೆಗಳಲ್ಲಿ ಸಂಪಿಗೂ ಟ್ಯಾಂಕರ್‌ನ ಪಂಪು ಮೂಲಕ ನೇರವಾಗಿ ನೀರು ಒದಗಿಸುವ ಪದ್ಧತಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು~ ಎಂದು ಅವರು ತಾಕೀತು ಮಾಡಿದರು.

`ಒಂದು ಟ್ಯಾಂಕರ್‌ನಲ್ಲಿ 4,000 ಲೀಟರ್ ನೀರು ಇರುತ್ತದೆ. ಒಂದೊಂದು ಮನೆಯಲ್ಲಿ 2,000 ಲೀಟರ್ ನೀರು ಸಂಗ್ರಹಿಸಬಹುದಾದ ಸಾಮರ್ಥ್ಯದ ಸಂಪ್‌ಗಳಿರುತ್ತವೆ. ಮನೆಗಳಲ್ಲಿನ ಸಂಪ್‌ಗಳಿಗೇ ಟ್ಯಾಂಕರ್‌ನ ಪಂಪು ಮೂಲಕ ನೀರು ಹಾಯಿಸಿದರೆ ಎರಡು ಮನೆಗಳಿಗಷ್ಟೇ ನೀರು ಪೂರೈಸಲು ಸಾಧ್ಯ. ಆದಕಾರಣ, ಟ್ಯಾಂಕರ್‌ಅನ್ನು ಒಂದು ನಿರ್ದಿಷ್ಟ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿ ಎಲ್ಲರಿಗೂ ಸಮನಾಗಿ ಆದ್ಯತೆಯ ಮೇರೆಗೆ ಕುಡಿಯುವ ನೀರು ಒದಗಿಸಬೇಕು~ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಭಾಗ್ಯಮ್ಮ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ಆದ ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮ, ಜಿಲ್ಲಾಧಿಕಾರಿ ಎಸ್.ಶಂಕರ ನಾರಾಯಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.