ADVERTISEMENT

ನೂರಾರು ಮನೆಗಳಿಗೆ ಕೊಳಚೆ ನೀರು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:25 IST
Last Updated 2 ಅಕ್ಟೋಬರ್ 2012, 19:25 IST

ಬೆಂಗಳೂರು: ನಗರದ ಅರಕೆರೆಯಲ್ಲಿನ ಕೆರೆ ಕಟ್ಟೆ ಒಡೆದು ಶಾಂತಿನಿಕೇತನ ಲೇಔಟ್ ಮತ್ತು ವೈಶ್ಯ ಬ್ಯಾಂಕ್ ಕಾಲೊನಿಯ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಕೆರೆ ಕಟ್ಟೆ ಒಡೆದು ತಗ್ಗು ಪ್ರದೇಶಗಳಿಗೆ ನೀರು ಹರಿಯಿತು. ರಸ್ತೆ, ಚರಂಡಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿತು. ಪರಿಣಾಮ ಸ್ಥಳೀಯ ನಿವಾಸಿಗಳು ರಾತ್ರಿಯಿಡೀ ನಿದ್ರೆಯಿಲ್ಲದೆ ಪರದಾಡಿದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ತಾತ್ಕಾಲಿಕ ಶೆಡ್‌ಗಳು ಕೂಡ ನೀರಿನಲ್ಲಿ ಕೊಚ್ಚಿ ಹೋದವು. ಅವರು, ಪರ್ಯಾಯ ಮಾರ್ಗವಿಲ್ಲದೆ ವಾಸ ಸ್ಥಳವನ್ನು ಬದಲಾಯಿಸಬೇಕಾಯಿತು.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸದಸ್ಯ ಎ.  ಎನ್.ಪುರುಷೋತ್ತಮ್, ರಾತ್ರಿಯಿಡೀ ಸ್ಥಳ ಪರಿಶೀಲನೆ ನಡೆಸಿದರು. ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ಬಿಬಿಎಂಪಿ ಮತ್ತು ಜಲಮಂಡಳಿ ಸಿಬ್ಬಂದಿ ಸ್ಥಳಕ್ಕೆ ಬಂದು ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರಚೆಲ್ಲಿದರು. ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಜಲಾವೃತಗೊಂಡಿದ್ದ ಪ್ರದೇಶಗಳು ಸಹಜ ಸ್ಥಿತಿಗೆ ಮರಳಿದವು.

`ಸುಮಾರು 150 ವರ್ಷದ ಹಿಂದೆ ನಿರ್ಮಿಸಲಾಗಿರುವ ಈ ಕೆರೆಗೆ, ಈಗ ಚರಂಡಿ ನೀರು ಸೇರುತ್ತಿದೆ. ಆದ್ದರಿಂದ ಕೆರೆ ನೀರನ್ನು ಸ್ಥಳೀಯರು ಬಳಸುತ್ತಿಲ್ಲ. ನಾಲ್ಕು ವರ್ಷದ ಹಿಂದೆ ಭೀಕರ ಮಳೆ ಸುರಿದಾಗ ಇದೇ ರೀತಿ ಕೆರೆ ಕಟ್ಟೆ ಒಡೆದು ಮನೆಗಳಿಗೆ ನೀರು ನುಗ್ಗಿತ್ತು. ಆಗ ಕೂಡ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ಸಮಸ್ಯೆಗೆ ಶೀಘ್ರವೇ ಶಾಶ್ವತ ಪರಿಹಾರ ಕಲ್ಪಿಸಬೇಕು~ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. `ಕೆರೆ ಸಮೀಪವೇ ನಮ್ಮ ಮನೆಯಿದೆ. ರಾತ್ರಿ ಹನ್ನೊಂದು ಗಂಟೆಗೆ ಜೋರಾಗಿ ಶಬ್ದ ಕೇಳಿಸಿತು. ಹೊರಗೆ ಬಂದು ನೋಡಿದಾಗ ಕೆರೆ ಕಟ್ಟೆ ಒಡೆದು ನೀರು ಬಡಾವಣೆಗಳಿಗೆ ಹರಿಯುತ್ತಿತ್ತು. ಕೂಡಲೇ ಬಡಾವಣೆಗಳಲ್ಲಿರುವ ಪರಿಚಿತರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಮೂವತ್ತು ನಿಮಿಷದ ಅಂತರದಲ್ಲಿ ಐದಾರು ಕಿ.ಮೀ.ವರೆಗೆ ನೀರು ಹರಿಯಿತು~ ಎಂದು ಶಾಂತಿನಿಕೇತನ ಲೇಔಟ್‌ನ ಪ್ರಮೋದ್ ಹೇಳಿದರು.

`ರಾತ್ರಿ ಮಲಗಿದ್ದ ವೇಳೆ ಮನೆಗೆ ನೀರು ನುಗ್ಗಿತು. ಸುಮಾರು ಮೂರು ಅಡಿಯಷ್ಟು ನೀರು ತುಂಬಿಕೊಂಡಿದ್ದನ್ನು ನೋಡಿ ಆಘಾತವಾಯಿತು. ಕೂಡಲೇ ಕುಟುಂಬ ಸದಸ್ಯರನ್ನು ಕರೆದುಕೊಂಡು ಹೊರಬಂದೆ. ಆದರೆ, ರಸ್ತೆ ಮೇಲೆ ಸಹ ನೀರು ರಭಸವಾಗಿ ಹರಿಯುತ್ತಿದ್ದರಿಂದ ಎಲ್ಲರೂ ಮಹಡಿಗೆ ಹೋದೆವು. ಸಮೀಪದ ಪೊಲೀಸ್ ಠಾಣೆಗೆ ಕರೆ ಮಾಡಿದಾಗ ಕೆರೆ ಕಟ್ಟೆ ಒಡೆದಿರುವುದು ಗೊತ್ತಾಯಿತು. ಜಲಮಂಡಳಿ ಸಿಬ್ಬಂದಿ ಮನೆಯೊಳಗಿದ್ದ ನೀರನ್ನು ಪಂಪ್ ಮಾಡಿ ಚರಂಡಿಗೆ ಬಿಟ್ಟರು~ ಎಂದು ಶ್ರೀಧರ್ ತಿಳಿಸಿದರು.

`ಮಣ್ಣಿನಿಂದ ಕೆರೆ ಕಟ್ಟೆಯನ್ನು ಕಟ್ಟಲಾಗಿದೆ. ಆ ಕಟ್ಟೆಯಿಂದ ಸದಾ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಮಣ್ಣು ಸಡಿಲಗೊಂಡು ಕಟ್ಟೆ ಒಡೆದಿರಬಹುದು. ಈ ಹಿಂದೆ ಇಂತಹ ಅನಾಹುತ ಸಂಭವಿಸಿದ್ದಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಸಂಬಂಧಪಟ್ಟ ಶಾಸಕರು, ಪಾಲಿಕೆ ಸದಸ್ಯರು ಈಗಲಾದರೂ ಎಚ್ಚೆತ್ತುಕೊಂಡು ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು~ ಎಂದು ಸ್ಥಳೀಯ ಅಂಗಡಿಯೊಂದರ ಮಾಲೀಕ ಲಕ್ಷ್ಮಣ್ ಮನವಿ ಮಾಡಿದರು.

`ಕೆರೆ ಸುಮಾರು ಹದಿನೈದು ಎಕರೆ ವಿಸ್ತೀರ್ಣ ಹೊಂದಿತ್ತು. ಈಗ ಒತ್ತುವರಿಯಾಗಿ ಐದಾರು ಎಕರೆ ಮಾತ್ರ ಉಳಿದಿದೆ. ಕೆರೆ ತುಂಬಿದಾಗ ಹೆಚ್ಚುವರಿ ನೀರು ಚರಂಡಿ ಮೂಲಕ ಹರಿಯುವಂತೆ ವ್ಯವಸ್ಥೆ ಮಾಡಲಾಗಿತ್ತು.

ಸುತ್ತಮುತ್ತಲ ಮನೆಗಳ ತ್ಯಾಜ್ಯ, ಕೊಳಚೆ ನೀರು ಕೆರೆ ಸೇರುತ್ತಿದ್ದರಿಂದ ಕೆರೆ ನೀರು ಸಂಪೂರ್ಣ ಹಾಳಾಗಿತ್ತು. ಆ ನೀರು ಚರಂಡಿಯಲ್ಲಿ ಹರಿದರೆ ಸಾಂಕ್ರಾಮಿಕ ರೋಗಗಳು ಎದುರಾಗಬಹುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಆ ವ್ಯವಸ್ಥೆಯನ್ನು ಕೈಬಿಡಲಾಗಿತ್ತು. ಅದೃಷ್ಟವಶಾತ್ ಆಗಿನಿಂದ ಒಮ್ಮೆಯೂ ಕೆರೆ ತುಂಬಲಿಲ್ಲ~ ಎಂದು ಮುನಿಯಪ್ಪ ಮತ್ತು ಮೀರಪ್ಪ ತಿಳಿಸಿದರು.

ಮಂಗಳವಾರ ಮಧ್ಯಾಹ್ನ ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಕಟ್ಟೆಗೆ ಮರಳು ಚೀಲಗಳನ್ನು ಜೋಡಿಸಿ, ಜೆಸಿಬಿ ಯಂತ್ರದ ಮೂಲಕ ಮಣ್ಣು ಸುರಿಯಲಾಯಿತು. ಸಂಜೆ ವೇಳೆಗೆ ಜಲಾವೃತಗೊಂಡಿದ್ದ ಪ್ರದೇಶಗಳು ಸಂಪೂರ್ಣ ಸಹಜ ಸ್ಥಿತಿಗೆ ಮರಳಿದವು. ಆದರೆ, ಕೊಳಚೆ ನೀರು ಹರಿದಿದ್ದ ಕಾರಣ ಬಡಾವಣೆಗಳ ಸುತ್ತಮುತ್ತಲ ಪ್ರದೇಶದಲ್ಲಿ ದುರ್ನಾತ ಮಾತ್ರ ಹಾಗೇ ಇತ್ತು.

ಬಿಡಿಎ ನಿರ್ಲಕ್ಷ್ಯ
`ಅರಕೆರೆ ಈ ಹಿಂದೆ ಅರಣ್ಯ ಇಲಾಖೆಗೆ ಸೇರಿತ್ತು. ಆಗ ಕೆರೆಯ ಅಭಿವೃದ್ಧಿ ಕಾರ್ಯ ನಡೆದಿರಲಿಲ್ಲ. ನಾಲ್ಕು ತಿಂಗಳ ಹಿಂದೆ ಕೆರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹಸ್ತಾಂತರಿಸಲಾಯಿತು. ಕೇವಲ ಲೇಔಟ್‌ಗಳ ನಿರ್ಮಾಣಕ್ಕೆ ಒತ್ತು ನೀಡುವ ಬಿಡಿಎ, ಕೆರೆಗಳ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ.  ಕೆರೆ ಸುತ್ತಮುತ್ತಲ ಪ್ರದೇಶದ ಮನೆಗಳಿಂದ ಹರಿದು ಬರುವ ಕೊಳಚೆ ನೀರು ಕೆರೆಯನ್ನು ಸೇರುತ್ತಿದೆ. ಇದರಿಂದ ನೀರಿನ ಒತ್ತಡ ಜಾಸ್ತಿಯಾಗಿದ್ದರಿಂದ ಮಣ್ಣಿನ ಕಟ್ಟೆ ಶಿಥಿಲಗೊಂಡು ಘಟನೆ ಸಂಭವಿಸಿರಬಹುದು. ಸೋಮವಾರವಷ್ಟೇ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ, ಅರಕೆರೆ, ಹುಳಿಮಾವು, ಸಾರಕ್ಕಿ ಕೆರೆಗಳನ್ನು ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದ್ದೆ~
 - ಸತೀಶ್‌ರೆಡ್ಡಿ, ಬೊಮ್ಮನಹಳ್ಳಿ ಶಾಸಕ

ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ
`ಕೆರೆಯ ಒಂದು ಬದಿಯಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಅಲ್ಲಿಗೆ ಮರಳಿನ ಚೀಲಗಳನ್ನು ಹಾಕಿ ಕಟ್ಟೆ ಕಟ್ಟಲಾಗಿತ್ತು. ರಾತ್ರಿ ಕೆರೆ ಕಟ್ಟೆ ಒಡೆದು ಬಡಾವಣೆಗಳಿಗೆ ನೀರು ನುಗ್ಗಿದೆ ಎಂಬ ಮಾಹಿತಿ ಬಂತು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಕಟ್ಟೆ ಹತ್ತು ಅಡಿಯಷ್ಟು ಒಡೆದು, ಸುಮಾರು ನೂರು ಮನೆಗಳಿಗೆ ನೀರು ನುಗ್ಗಿತ್ತು.
ಯಾವ ಕಾರಣಕ್ಕೆ ಕೆರೆ ಕಟ್ಟೆ ಒಡೆದಿದೆ ಎಂಬುದು ತಿಳಿದಿಲ್ಲ. ಈಗಾಗಲೇ ಜಲಾವೃತಗೊಂಡಿದ್ದ ಪ್ರದೇಶಗಳನ್ನು ಸಹಜ ಸ್ಥಿತಿಗೆ ತರಲಾಗಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಔಷಧ ಸಿಂಪಡಿಸಲಾಗಿದೆ.
 - ಎ.ಎನ್.ಪುರುಷೋತ್ತಮ್, ಅರಕೆರೆ ವಾರ್ಡ್ ಸದಸ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.