ADVERTISEMENT

ನೆಲಮಂಗಲ: ವೈಕುಂಠ ಏಕಾದಶಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 18:30 IST
Last Updated 6 ಜನವರಿ 2012, 18:30 IST

ನೆಲಮಂಗಲ: ಇಲ್ಲಿಗೆ ಸಮೀಪದ ದಾಸನಪುರದ ರಾಮಾನುಜ ಪೀಠಂನ ಉಭಯ ವೇದಾಂತ ವೈಷ್ಣವ ಸಭಾದ ಪದ್ಮಾವತಿ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದವು.

ಶ್ರೀನಿವಾಸ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾ ಸುದರ್ಶನ ಹೋಮ, ವಿಷ್ಣುಸಹಸ್ರನಾಮ ಹೋಮ ಮಾಡಲಾಯಿತು. ನರಸಿಂಹಾಚಾರ್ಯ, ಉದಯೋಗಾನಂದಶರ್ಮ ಅವರ ತಂಡ ಮತ್ತು ದಾಸನಪುರದ ರಾಮಾನುಜ ವೇದ ಆಗಮ ಪಾಠ ಶಾಲಾ ವಿದ್ಯಾರ್ಥಿಗಳು ವಿಷ್ಣು ಸಹಸ್ರನಾಮ ಮತ್ತು ವೇದ ಪಾರಾಯಣ ಮಾಡಿದರು.

ಶ್ರೀನಿವಾಸ ಭಜನಾ ಮಂಡಳಿಯಿಂದ ಆಂಡಾಳ್ ಗೋಷ್ಠಿ, ವಿದ್ವಾನ್ ಕೆ.ಆರ್. ಗಂಗಾಧರ್ ಅವರ ಪಕ್ಕವಾದ್ಯ, ವಿದುಷಿ ಜಯಲಕ್ಷ್ಮಿ ತಂಡದಿಂದ ದೇವರನಾಮಗಳು, ಪಾಂಡುರಂಗ ಭಜನಾ ಮಂಡಳಿಯಿಂದ ದಾಸರ ಕೀರ್ತನೆಗಳು, ವರಸಿದ್ಧಿ ವಿನಾಯಕ ಭಜನಾ ಮಂಡಳಿಯಿಂದ ಗೋವಿಂದ ನಾಮಾವಳಿ ಸಂಕೀರ್ತನ, ವಿಜಯೇಂದ್ರರಾವ್ ಅವರಿಂದ ದಾಸರು ಕಂಡ ಶ್ರೀನಿವಾಸ, ದಾಸರ ಪದಗಳನ್ನು ಹಾಡಿದರು. ಶ್ರೀಮಾತಾ ವಿಪ್ರ ಮಂಡಳಿ, ವಾಸವಿ ಮಹಿಳಾ ಮಂಡಳಿ ತಂಡದವರು ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿ ನಡೆಸಿಕೊಟ್ಟರು. ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು. ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.