ಬೆಂಗಳೂರು: ಹೊಂಗಸಂದ್ರ ಸಮೀಪದ ಮುನೇಶ್ವರಲೇಔಟ್‌ನಲ್ಲಿ ಸೋದರಿಯರಿಬ್ಬರು ಒಂದೇ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚನ್ನಸಂದ್ರದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ತೇಜಸ್ವಿನಿ (22) ಹಾಗೂ ಅವರ ತಂಗಿ ರಂಜಿತಾ (20) ಮೃತರು. ಸೋಮವಾರ ರಾತ್ರಿ 12ರಿಂದ ಬೆಳಗಿನ ಜಾವ 4ರ ಅಂತರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.
ಅವರ ತಂದೆ ಮಲ್ಲೇಶಪ್ಪ, ಮುನೇಶ್ವರ ಲೇಔಟ್‌ನಲ್ಲೇ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ.
‘ತೇಜಸ್ವಿನಿಗೆ ಮದುವೆ ಮಾಡಲು ನಿರ್ಧರಿಸಿದ್ದೆವು. ಅದಕ್ಕೆ ಒಪ್ಪದ ಆಕೆ, ತಾನು ಕಾಲೇಜಿನಲ್ಲಿ ಒಬ್ಬಾತನನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿದಳು. ಈ ನಡುವೆ ರಂಜಿತಾಳೂ ತಾನು ಸಹ ಹುಡುಗನೊಬ್ಬನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದಳು. ಪ್ರೀತಿಸಿದವನ ಜತೆಯೇ ಮದುವೆ ಮಾಡುವಂತೆ ಕೆಲ ದಿನಗಳಿಂದ ಇಬ್ಬರೂ ಹಟಕ್ಕೆ ಬಿದ್ದಿದ್ದರು’ ಎಂದು ಮೃತರ ತಂದೆ ಮಲ್ಲೇಶಪ್ಪ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದರು.
‘ಸೋಮವಾರ ರಾತ್ರಿ ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಆಯಿತು. ಆಗ ನಾಳೆ ಆ ಇಬ್ಬರೂ ಹುಡುಗರನ್ನು ಮಡಿವಾಳ ಠಾಣೆಗೆ ಕರೆದುಕೊಂಡು ಬನ್ನಿ. ಪೊಲೀಸರ ಸಮ್ಮುಖದಲ್ಲೇ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದೆ. ಇಷ್ಟೆಲ್ಲ ಮಾತುಕತೆ ಆದ ಮೇಲೆ ಮಲಗುವುದಾಗಿ ಇಬ್ಬರೂ ಕೋಣೆಗೆ ಹೋದರು’ ಎಂದು ಮಲ್ಲೇಶಪ್ಪ ಪೊಲೀಸರಿಗೆ ತಿಳಿಸಿದ್ದಾರೆ.
ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮಲ್ಲೇಶಪ್ಪ ಅವರು ಮೂತ್ರ ವಿಸರ್ಜನೆಗೆ ಎಚ್ಚರಗೊಂಡಿದ್ದಾರೆ. ಒಮ್ಮೆ ಮಕ್ಕಳನ್ನು ನೋಡಿ ಬರಲು ಅವರು ಕೋಣೆಗೆ ಹೋದಾಗ ಇಬ್ಬರೂ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡಿರುವುದನ್ನು ಕಂಡು ಚೀರಿಕೊಂಡಿದ್ದಾರೆ.
ನಂತರ ಸ್ಥಳೀಯರ ನೆರವಿನಿಂದ ಮಕ್ಕಳನ್ನು ಕುಣಿಕೆಯಿಂದ ಕೆಳಗಿಳಿಸಿ, ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗಮಧ್ಯೆ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪತ್ರ ಬರೆದಿಟ್ಟಿದ್ದಾರೆ: ‘ರಾತ್ರಿ ಕೋಣೆ ಸೇರಿದ ಅಕ್ಕ–ತಂಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಪತ್ರ ಬರೆದಿಟ್ಟಿದ್ದಾರೆ.
‘ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಅಪ್ಪ–ಅಮ್ಮ ನಮ್ಮನ್ನು ಕ್ಷಮಿಸಿ’ ಎಂದು ಅದರಲ್ಲಿ ಹೇಳಿದ್ದಾರೆ. ಘಟನೆ ಸಂಬಂಧ ಮಡಿವಾಳ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.