ADVERTISEMENT

ನೇತ್ರಾವತಿ ತಿರುವು ಯೋಜನೆ ಜಾರಿಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಬೆಂಗಳೂರು: ಬಯಲುಸೀಮೆಯ 72 ತಾಲ್ಲೂಕುಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ನೇತ್ರಾವತಿ ತಿರುವು ಯೋಜನೆಯನ್ನು ಜಾರಿಗೊಳಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಮಾಡಿದರು.

ಗೃಹ ಕಚೇರಿ `ಕೃಷ್ಣಾ~ದಲ್ಲಿ ಶನಿವಾರ ಮುಖ್ಯಮಂತ್ರಿ ಭೇಟಿ ಮಾಡಿ ಈ ಬಗ್ಗೆ ಸಮಾಲೋಚನೆ ನಡೆಸಿದ ಮುನಿಯಪ್ಪ, ಎತ್ತಿನಹೊಳೆ ಯೋಜನೆಗಿಂತ ಪರಮಶಿವಯ್ಯ ವರದಿ ಆಧರಿಸಿ ನೇತ್ರಾವತಿ ತಿರುವು ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗಗಳಿಗೆ ಈ ಯೋಜನೆಯಿಂದ ನೀರಾವರಿ ಸೌಲಭ್ಯ ದೊರೆಯಲಿದೆ. 72 ತಾಲ್ಲೂಕುಗಳ ನೀರಿನ ಬವಣೆ ನೀಗಲಿದೆ. ಅಂತರ್ಜಲ ಮಟ್ಟ ಒಂದೂವರೆ ಸಾವಿರ ಅಡಿಗೆ ತಲುಪಿರುವ ಈ ಭಾಗದಲ್ಲಿ ಈಗಲಾದರೂ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸದಿದ್ದರೆ ಭವಿಷ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಸಿ.ಎಂಗೆ ಮನವರಿಕೆ ಮಾಡಿಕೊಟ್ಟರು.

ಕುಡಿವ ನೀರಿನ ಸಮಸ್ಯೆ ನಿವಾರಿಸಲು ಹೊಸದಾಗಿ ಕೊಳವೆ ಬಾವಿ ಕೊರೆಯುವ ಬದಲು ರೈತರ ಜಮೀನುಗಳಲ್ಲಿ ಇರುವ ಕೊಳವೆ ಬಾವಿಗಳ ನೀರನ್ನು ಬಳಸಿಕೊಳ್ಳುವಂತೆ ಸಲಹೆ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.