ADVERTISEMENT

ನೇಮಕಾತಿ ಪ್ರಕ್ರಿಯೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 19:55 IST
Last Updated 24 ಫೆಬ್ರುವರಿ 2011, 19:55 IST

ಬೆಂಗಳೂರು: ಬಿಬಿಎಂಪಿ ಆರೋಗ್ಯ ವಿಭಾಗದಲ್ಲಿ ಖಾಲಿ ಇರುವ 63 ಆರೋಗ್ಯ ಸಹಾಯಕರು (ಎಎನ್‌ಎಂ), 26 ಉಪ ನೋಂದಣಾಧಿಕಾರಿಗಳು ಹಾಗೂ ಶಿಕ್ಷಣ ವಿಭಾಗದಲ್ಲಿ ಖಾಲಿ ಇರುವ 301 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಪಾಲಿಕೆ ಸಭೆಯು ಗುರುವಾರ ಅನುಮೋದನೆ ನೀಡಿತು.

ಆರೋಗ್ಯ ವಿಭಾಗದಲ್ಲಿ ಖಾಲಿ ಉಳಿದಿರುವ 741 ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಅದರಂತೆ ತುರ್ತು ಅಗತ್ಯವಿರುವ 63 ಆರೋಗ್ಯ ಸಹಾಯಕರು ಹಾಗೂ 26 ಉಪ ನೋಂದಣಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸಭೆ ಅನುಮೋದಿಸಿತು.

ಹಾಗೆಯೇ 122 ಪ್ರೌಢಶಾಲಾ ಶಿಕ್ಷಕರು, 90 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಶಿಶುವಿಹಾರಗಳಿಗೆ 89 ಶಿಕ್ಷಕರ ನೇರ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ಹುದ್ದೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯಿಂದ ಐಐಎಂ/ ಎನ್‌ಸಿಇಆರ್‌ಟಿ/ ಡಿಪಿಐ ಮುಖಾಂತರ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದರೊಳಗೆ ಆಯ್ಕೆ ಮಾಡುವ ಪ್ರಸ್ತಾವಕ್ಕೆ ಸಭೆ ಅನುಮೋದನೆ ನೀಡಿತು.

ನಗರದ ಕೊಳೆಗೇರಿ ನಿವಾಸಿಗಳು, ಸಫಾಯಿ ಕರ್ಮಚಾರಿಗಳು, ಆಟೊ ಚಾಲಕರು, ಪೌರ ಕಾರ್ಮಿಕರು, ಗುತ್ತಿಗೆ ಪೌರ ಕಾರ್ಮಿಕರು ಹಾಗೂ ಬಿಪಿಎಲ್ ಚೀಟಿ ಹೊಂದಿರುವ ಸುಮಾರು 6.96 ಲಕ್ಷ ಕುಟುಂಬಗಳಿಗೆ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸುವ ‘ಸುವರ್ಣ ಆರೋಗ್ಯ ಸುರಕ್ಷಾ ವಿಮೆ’ ಯೋಜನೆ ಜಾರಿಗೆ ಸಭೆ ಒಪ್ಪಿಗೆ ಸೂಚಿಸಿತು.

ಇದಕ್ಕೂ ಮುನ್ನ ಇತ್ತೀಚೆಗಷ್ಟೇ ನಿಧನರಾದ ಮಾಜಿ ಸಚಿವ ಎಂ.ಪಿ. ಪ್ರಕಾಶ್ ಅವರಿಗೆ ಸಭೆಯಲ್ಲಿ ಸಂತಾಪ ಸಲ್ಲಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.