ADVERTISEMENT

ನೈತಿಕ ಅಧಃಪತನ: ಗೊ.ರು.ಚ ಆತಂಕ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 20:05 IST
Last Updated 21 ಫೆಬ್ರುವರಿ 2011, 20:05 IST

ಬೆಂಗಳೂರು: ‘ಇಂದಿನ ರಾಜಕೀಯ ವ್ಯವಸ್ಥೆ ಅರೆ ಹುಚ್ಚನಂಥ ಸ್ಥಿತಿಯಲ್ಲಿದೆ. ಸಂಸ್ಕೃತಿ ಸಾಯುತ್ತಿದೆ. ಧರ್ಮದ ಹೆಸರಿನಲ್ಲಿ ಹಿಂಸೆ ನಡೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಇಂದು ನೈತಿಕತೆ ಪತನವಾಗುತ್ತಿರುವುದು ಆತಂಕ ಮೂಡಿಸಿದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.

ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ‘ಬಂಜಾರ ಪ್ರದರ್ಶನ ಕಲಾ ಉತ್ಸವ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಜನರ ಹಿತ ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ಆ ರೀತಿಯ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಇನ್ನೊಂದೆಡೆ ಜನತೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣ ಗಳಿಸುವ ಮನೋಭಾವ ಮೂಡಿರುವುದರಿಂದ ಆರ್ಥಿಕ ಅಸಮಾನತೆ ತೀವ್ರವಾಗಿದೆ’ ಎಂದರು.

‘ಬಂಜಾರ ಸಮುದಾಯದ ಜನರು ಶ್ರಮಜೀವಿಗಳು. ಹಾಗೆಯೇ ಅವರಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಬಂಜಾರರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆದರೆ ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಇಂದಿಗೂ ಹಿಂದುಳಿದಿದ್ದಾರೆ. ಈ ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕಿದೆ’ ಎಂದು ಹೇಳಿದರು.

‘ಬಂಜಾರರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿ ಕುರಿತು ಅಧ್ಯಯನ ನಡೆಯಬೇಕಿದೆ. ಸದ್ಯದಲ್ಲೇ ಜಾನಪದ ವಿ.ವಿ ರಚನೆಯಾಗಲಿದ್ದು, ಈ ಸಂದರ್ಭದಲ್ಲಿ ಬಂಜಾರ ಪರಂಪರೆ, ಆಚರಣೆ ಕುರಿತ ಅಧ್ಯಯನ ಪೀಠ ರಚಿಸಲು ಮುಂದಾದರೆ ಅದಕ್ಕೆ  ಪ್ರೋತ್ಸಾಹ ನೀಡಲಾಗುವುದು’ ಎಂದು ನುಡಿದರು.

ಮಾಜಿ ಸಚಿವ ಕೆ.ಶಿವಮೂರ್ತಿ, ‘ಲಂಬಾಣಿ ಭಾಷೆಗೆ ಲಿಪಿಯಿಲ್ಲದ ಕಾರಣ ನಶಿಸಿ ಹೋಗುವ ಸ್ಥಿತಿ ತಲುಪಿದೆ. ಸಮುದಾಯದ ಜನರ ಕಲ್ಯಾಣಕ್ಕೆ ಅಗತ್ಯ ಯೋಜನೆಗಳನ್ನು ಸರ್ಕಾರ ರೂಪಿಸಬೇಕಿದೆ.ಹಾಗೆಯೇ ಬಂಜಾರ ಅಧ್ಯಯನ ಪೀಠ ರಚನೆಗೆ ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿದರು.

ವೇದಿಕೆ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ, ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ರಾಮಾನಾಯಕ್, ಜೆಡಿಎಸ್ ಮುಖಂಡ ಮೂರ್ತಿ ನಾಯಕ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.