ADVERTISEMENT

ನೈಸರ್ಗಿಕ ಅನಿಲ ಪೂರೈಕೆಗೆ ನಾಳೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 20:31 IST
Last Updated 16 ಜೂನ್ 2017, 20:31 IST
ನೈಸರ್ಗಿಕ ಅನಿಲ ಪೂರೈಕೆಗೆ ನಾಳೆ ಚಾಲನೆ
ನೈಸರ್ಗಿಕ ಅನಿಲ ಪೂರೈಕೆಗೆ ನಾಳೆ ಚಾಲನೆ   

ಬೆಂಗಳೂರು: ಭಾರತೀಯ ಅನಿಲ ಪ್ರಾಧಿಕಾರದ (ಗೇಲ್‌) ವತಿಯಿಂದ ಮನೆಗಳಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್‌ಜಿ) ಪೂರೈಕೆ ಮಾಡುವ ಯೋಜನೆ ಜೂನ್‌ 18ರಂದು ಉದ್ಘಾಟನೆಗೊಳ್ಳಲಿದೆ.

ಎಚ್‌ಎಸ್‌ಆರ್‌ ಬಡಾವಣೆಯ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾರಂಭವನ್ನು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ರಮೇಶ್‌ ಚಂದ್ರಪ್ಪ ಜಿಗಜಿಣಗಿ, ರಾಜ್ಯ ಸಚಿವರಾದ ಎಚ್‌.ಕೆ.ಪಾಟೀಲ, ಯು.ಟಿ.ಖಾದರ್‌, ಎಂ.ಕೃಷ್ಣಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.

‘ನಗರದಲ್ಲಿ 66 ಕಿ.ಮೀ. ಸ್ಟೀಲ್‌ ಕೊಳವೆ ಹಾಗೂ 452 ಕಿ.ಮೀ. ಎಂಡಿಪಿಇ ಕೊಳವೆಯನ್ನು ಅಳವಡಿಸಲಾಗಿದೆ. 34,500 ಮನೆಗಳಿಗೆ  ಕೊಳವೆಯ ಮಾರ್ಗವನ್ನು ಹಾಕಲಾಗಿದೆ. ಈ ಪೈಕಿ 23,300 ಮನೆಗಳು ಸಂಪರ್ಕ ಪಡೆಯಲು ಸಿದ್ಧವಾಗಿವೆ’ ಎಂದು  ಬೆಂಗಳೂರು ಗೇಲ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪಾರ್ಥಜಾನ ಹೇಳಿದರು.

‘ಸುಮನಹಳ್ಳಿ, ಹೆಣ್ಣೂರು ಮತ್ತು ಪೀಣ್ಯದ ಬಿಎಂಟಿಸಿ ಬಸ್‌ ಡಿಪೊಗಳಲ್ಲಿ ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಂಟೆಲ್‌, ಬಾಷ್‌, ಬಿಎಚ್‌ಇಎಲ್‌, ಅಪೊಟೆಕ್ಸ್‌ ಫಾರ್ಮಾಕೆಮಿಕಲ್ಸ್‌, ಗರುಡ ಪಾಲಿಫ್ಲೆಕ್ಸ್‌, ಟೊಯೊಟಾ ಇಂಡಸ್ಟ್ರೀಸ್‌ ಎಂಜಿನ್‌ ಇಂಡಿಯಾ, ಎಡಿಸಿಒಸಿಕೆ ಇನ್‌ಗ್ರಾಮ್‌ ಲಿಮಿಟೆಡ್‌ಗೆ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ. 22 ವಾಣಿಜ್ಯ ಘಟಕಗಳಿಗೆ ಪಿಎನ್‌ಜಿ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘2017–18ರಲ್ಲಿ ಮತ್ತೆ 40,000 ಮನೆಗಳಿಗೆ ಪಿಎನ್‌ಜಿ ಪೂರೈಸುವ ಯೋಜನೆ ಇದೆ. ಮೊದಲ ಹಂತದಲ್ಲಿ ಸಿಂಗಸಂದ್ರ, ಮಂಗಳಪಾಳ್ಯ, ಎಚ್‌ಎಸ್‌ಆರ್‌ ಬಡಾವಣೆ, ಎಚ್‌ಬಿಆರ್‌ ಬಡಾವಣೆ, ಮಾರತಹಳ್ಳಿ, ಬಿಇಎಲ್‌ ಕಾಲೊನಿ ಪ್ರದೇಶಗಳಲ್ಲಿ ಅನಿಲ ಪೂರೈಸುತ್ತೇವೆ’ ಎಂದರು.

ಇಕೋ ಟೆಕ್‌ ಸೊಲ್ಯುಷನ್ಸ್‌ ಸಂಸ್ಥೆಯ ಶರವಣ ಮಾತನಾಡಿ, ‘ಒಂದು ಕೆ.ಜಿ. ಸಿಎನ್‌ಜಿಗೆ ಬೆಂಗಳೂರಿನಲ್ಲಿ ₹44 ದರ ಇದೆ. ಒಂದು ಲೀಟರ್‌ ಪೆಟ್ರೋಲ್‌ಗೆ ₹77 ದರ ಇದೆ. ಒಂದು ಲೀಟರ್‌ ಪೆಟ್ರೋಲ್‌ ಬಳಕೆಯಿಂದ ಸಿಗುವ ಮೈಲೇಜ್‌ಗಿಂತ ಶೇ 50ರಷ್ಟು ಹೆಚ್ಚು ಮೈಲೇಜ್‌ ಸಿಎನ್‌ಜಿ ಬಳಕೆಯಿಂದ ಸಿಗಲಿದೆ. ಹೋಂಡಾ ಆ್ಯಕ್ಟಿವಾ ಸ್ಕೂಟರ್‌ಗೆ 750 ಗ್ರಾಂ ಸಾಮರ್ಥ್ಯದ ಸಿಲಿಂಡರ್‌ ಅಳವಡಿಸಿದ್ದೇವೆ. ಇದನ್ನು ಬಳಸಿ 60 ಕಿ.ಮೀ ಕ್ರಮಿಸಬಹುದು’ ಎಂದರು.

ಆನ್‌ಲೈನ್‌ ಮೂಲಕ ನೋಂದಣಿ
ಅನಿಲ ಸಂಪರ್ಕ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಗುರುತಿನ ಚೀಟಿ, ವಿಳಾಸದ ದಾಖಲೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಗೇಲ್‌ ಸಂಸ್ಥೆಯ ತಾಂತ್ರಿಕ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಧಕ–ಬಾಧಕಗಳನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತಾರೆ. ಸಂಪರ್ಕ ಕಲ್ಪಿಸಲು ಯೋಗ್ಯವಾಗಿದ್ದರೆ ಮಾತ್ರ ಅನುಮತಿ ದೊರೆ ಯುತ್ತದೆ.

ಬಳಿಕ ಕಂಪೆನಿಯಿಂದ ಗ್ರಾಹಕರಿಗೆ ಸಂದೇಶ ರವಾನಿಸಿ, ನಿರ್ದಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಗ್ರಾಹಕರು ಶುಲ್ಕ ಪಾವತಿಸಿ ಸಂಪರ್ಕ ಪಡೆಯಬಹುದು. ಮಾಹಿತಿಗೆ www.gailgas.com ಸಂಪರ್ಕಿಸಬಹುದು. ಪಿಎನ್‌ಜಿ ಸಂಪರ್ಕಕ್ಕೆ ಆರಂಭದಲ್ಲಿ ₹ 5,800 ಪಾವತಿಸಬೇಕು. ಇದರಲ್ಲಿ ₹ 5 ಸಾವಿರ ಮರುಪಾವತಿ ಮಾಡಲಾಗುತ್ತದೆ.

ಇತಿಮಿತಿಗಳು
*  ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಸಿಎನ್‌ಜಿ ತುಂಬಿಸುವ ವ್ಯವಸ್ಥೆ ಇದೆ
* ಸಿಎನ್‌ಜಿ ಸಿಲಿಂಡರ್‌ ಪೂರ್ತಿ ತುಂಬಿಸಿದರೆ, ಕಾರಿನಲ್ಲಾದರೆ   250 ಕಿ.ಮೀ ದೂರದವರೆಗೆ, ಸ್ಕೂಟರ್‌ನಲ್ಲಾದರೆ  60 ಕಿ.ಮೀ ದೂರದವರೆಗೆ ಕ್ರಮಿಸಬಹುದು.
*  ಕಿಟ್‌ ಅಳವಡಿಕೆಗೆ ಹೆಚ್ಚುವರಿ ವೆಚ್ಚ ಭರಿಸಬೇಕಾಗುತ್ತದೆ

ಅನುಕೂಲಗಳು
* ಮಾಲಿನ್ಯ ನಿಯಂತ್ರಣ
* ಪೆಟ್ರೋಲ್‌ಗಿಂತ ಅಗ್ಗ
* ಪ್ರತಿ ಕಿ.ಮೀ. ಪ್ರಯಾಣಕ್ಕೆ ತಗಲುವ ವೆಚ್ಚ ಕಡಿಮೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT