ADVERTISEMENT

ನೈಸರ್ಗಿಕ ಅನಿಲ ಪೂರೈಕೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:55 IST
Last Updated 20 ಜನವರಿ 2011, 19:55 IST

ಬೆಂಗಳೂರು:  ರಾಜ್ಯಕ್ಕೆ ನೈಸರ್ಗಿಕ ಅನಿಲ ಪೂರೈಕೆ ಮಾಡುವಂತೆ ವೆಸ್ಟ್‌ಇಂಡಿಸ್ ನಿಯೋಗಕ್ಕೆ ಮನವಿ ಮಾಡಿದ್ದು, ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಗುರುವಾರ ಇಲ್ಲಿ ತಿಳಿಸಿದರು.

ರಾಜ್ಯಕ್ಕೆ ಮೂರು ದಿನಗಳ ಭೇಟಿ ನೀಡಿರುವ ಟ್ರಿನಿಡಾಡ್ ಮತ್ತು ಟೊಬ್ಯಾಗೊನ ಪ್ರವಾಸೋದ್ಯಮ ಸಚಿವ ರೂಬರ್ಟ್ ಗ್ರಿಪಿಕ್ ನೇತೃತ್ವದ ನಿಯೋಗವು ತಮ್ಮೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಈ ಮನವಿ ಮಾಡಲಾಗಿದೆ. ಧಾಬೋಲ್‌ನಿಂದ ಬೆಂಗಳೂರಿಗೆ ಅನಿಲ ಪೂರೈಕೆಯಾಗಲಿದ್ದು, ಇದರಿಂದ ಐದು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಒಪ್ಪಂದವಾಗಿದೆ. ನಮಗೆ ಹೆಚ್ಚಿನ ಅನಿಲದ ಅಗತ್ಯವಿರುವುದರಿಂದ ಈ ಮಾರ್ಗದ ಮೂಲಕ ನೈಸರ್ಗಿಕ ಅನಿಲ ಪೂರೈಸುವಂತೆ ಕೋರಲಾಗಿದೆ ಎಂದು ತಿಳಿಸಿದರು.

ನಿಯೋಗವು ನೈಸರ್ಗಿಕ ಅನಿಲ ಪೂರೈಕೆಗೆ ಮತ್ತು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದೆ. ಮುಂದಿನ ದಿನಗಳಲ್ಲಿ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗುವುದು. ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಇದರಿಂದ ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

27ರಿಂದ ಹಂಪಿ ಉತ್ಸವ: ಇದೇ 27ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮೊದಲಾದವರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.