ADVERTISEMENT

ನೈಸ್‌ಗೆ ಭೂಮಿ: ರೈತರಿಂದ ರಸ್ತೆತಡೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 19:10 IST
Last Updated 23 ಫೆಬ್ರುವರಿ 2011, 19:10 IST

ರಾಜರಾಜೇಶ್ವರಿನಗರ: ಸರ್ಕಾರವು ಕಡಿಮೆ ಬೆಲೆಗೆ ನೈಸ್ ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಟೌನ್‌ಶಿಪ್ ಯೋಜನೆಗೆ ಭೂಮಿಯನ್ನು ನೀಡಲು ಮುಂದಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ ಭೂಮಿ ನೀಡುವುದಿಲ್ಲ ಎಂದು ರೈತರು ಬುಧವಾರ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕುಂಬಳಗೋಡು  ಬಳಿಯ ಬೆಂಗಳೂರು ಮೈಸೂರು ರಸ್ತೆಯಲ್ಲಿ ಬುಧವಾರ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ ಸಾವಿರಾರು ರೈತರು, ಪ್ರಾಣ ಹೋದರೂ ಒಂದಿಂಚು ಭೂಮಿನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನ ರೈತರು, ಹಲವಾರು ಸಂಘ-ಸಂಸ್ಥೆಗಳು, ರಾಜಕೀಯ ಮುಖಂಡರು ಭಾಗವಹಿಸಿ ಸರ್ಕಾರ ಹಾಗೂ ನೈಸ್ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

 ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ‘ಟೌನ್‌ಶಿಪ್ ನಿರ್ಮಿಸಲು ಮೊದಲ ಹಂತವಾಗಿ ಗೋಣಿಪುರ, ಸಿಗೇಹಳ್ಳಿ, ತಿಪ್ಪೂರು ಸೇರಿದಂತೆ ಹಲವು ಗ್ರಾಮಗಳ ಜಮೀನುಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದರ ನಿಮಿತ್ತ ಜಮೀನು ದರ ನಿಗದಿ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಅಯ್ಯಪ್ಪ ಅವರು ಏಕಪಕ್ಷೀಯವಾಗಿ ಅತ್ಯಂತ ಕಡಿಮೆ ಬೆಲೆ ಪ್ರಕಟಿಸಿದ್ದಾರೆ. ಈ ಪ್ರದೇಶದಲ್ಲಿ ಪ್ರತಿ ಎಕರೆಗೆ ರೂ 5 ಕೋಟಿ ಮಾರುಕಟ್ಟೆ ಬೆಲೆ ಇದ್ದರೆ, ಇವರು ಕೇವಲ ರೂ 40ರಿಂದ 41 ಲಕ್ಷ ಬೆಲೆ ಪ್ರಕಟಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ‘ಟೌನ್‌ಶಿಪ್ ನಿರ್ಮಾಣಕ್ಕೆ ಒಂದಿಂಚೂ ಭೂಮಿಯನ್ನು ಬಿಡುವುದಿಲ್ಲ. ಆದರೆ   ರಸ್ತೆ ನಿರ್ಮಿಸುವುದಾದರೆ ಭೂಮಿ ನೀಡಲು ನಮ್ಮ ವಿರೋಧವಿಲ್ಲ. ಅದಕ್ಕೆ ತಕ್ಕಂತೆ ಮಾರುಕಟ್ಟೆ ಬೆಲೆ ನೀಡಿ ಜಮೀನು ಪಡೆಯಬೇಕು’ ಎಂದು ಅವರು ತಾಕೀತು ಮಾಡಿದರು.

 ‘ವಿರೋಧ ಪಕ್ಷದ ನಾಯಕರಾಗಿದ್ದಾಗ ಬಿ.ಎಸ್.ಯಡಿಯೂರಪ್ಪ ಅವರು ನೈಸ್ ಸಂಸ್ಥೆ ಪ್ರಸ್ತಾಪ ಬಂದಾಗಲ್ಲೆಲ್ಲ ತೀವ್ರವಾಗಿ ವಿರೋಧಿಸುತ್ತಿದ್ದರು. ಆದರೆ, ಈಗ ಅವರೇ ಮುಖ್ಯಮಂತ್ರಿಯಾಗಿ ಸಂಸ್ಥೆಗೆ ಬೆಂಬಲ ನೀಡುತ್ತಿರುವುದು ದುರದೃಷ್ಟಕರ’ ಎಂದು ನುಡಿದರು.

 ‘ಬಲವಂತವಾಗಿ ಜಮೀನು ವಶಪಡಿಸಿಕೊಳ್ಳಲು ಮುಂದಾದರೆ ಜೀವ ಹೋದರೂ ನಾವು ಭೂಮಿಯನ್ನು ಬಿಡುವುದಿಲ್ಲ’ ಎಂದು ರೈತರು ಒಕ್ಕೊರಲಿನಿಂದ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ನ ಸ್ಥಳೀಯ ಮುಖಂಡ ಎಸ್.ಟಿ.ಸೋಮಶೇಖರ್ ಮಾತನಾಡಿ, ‘ರೈತರನ್ನು ನೆಮ್ಮದಿಯಿಂದ ಬದುಕಲು ಬಿಡಿ. ನಿಮ್ಮ ಸ್ವಾರ್ಥಗೋಸ್ಕರ ಬಲಿ ತೆಗೆದುಕೊಳ್ಳಬೇಡಿ. ರೈತರು ನಿಮ್ಮ ಗುಲಾಮರಲ್ಲ ಅವರು ತಿರುಗಿಬಿದ್ದರೆ ನಿಮ್ಮ ಸರ್ಕಾರ ಉಳಿಯುವುದಿಲ್ಲ’ ಎಂದು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.

ಬಿಜೆಪಿ ಮುಖಂಡ ಬಿ.ಎಂ.ಚನ್ನಪ್ಪ, ಗ್ರಾ.ಪಂ. ಅಧ್ಯಕ್ಷ ಬೆಟ್ಟಯ್ಯ, ರೈತ ಮುಖಂಡರಾದ ಆರ್.ಲಕ್ಷ್ಮಯ್ಯ, ಪಟೇಲ್ ನರಸೇಗೌಡ, ಬಿ.ಎಲ್.ನಾರಾಯಣ ಸ್ವಾಮಿ ಮಾತನಾಡಿ, ಪ್ರಾಣ ಹೋದರೂ ಸರಿ ಟೌನ್ ಶಿಪ್ ನಿರ್ಮಾಣಕ್ಕೆ ಭೂಮಿ ಬಿಡುವುದಿಲ್ಲ ಎಂದರು.

ಪ್ರತಿಭಟನೆ ನಿರತ ರೈತರ ಮನವೊಲಿಸಿದ ಪೊಲೀಸರು ಹೆದ್ದಾರಿ ಪಕ್ಕದಲ್ಲಿ ಇರುವ ಟೆಂಟ್‌ಗೆ ಪ್ರತಿಭಟನೆಕಾರರನ್ನು ಸ್ಥಳಾಂತರಿಸಿದರು. ನಂತರ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಕಿ.ಮೀ ವರೆಗೆ ವಾಹನಗಳು ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.