ADVERTISEMENT

ನೈಸ್ ಕಾರ್ಯಕ್ಕೆ ಪೊಲೀಸರ ಬೆಂಗಾವಲು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST
ನೈಸ್ ಕಾರ್ಯಕ್ಕೆ ಪೊಲೀಸರ ಬೆಂಗಾವಲು
ನೈಸ್ ಕಾರ್ಯಕ್ಕೆ ಪೊಲೀಸರ ಬೆಂಗಾವಲು   

ರಾಜರಾಜೇಶ್ವರಿನಗರ: ಹೊಸಕೆರೆಹಳ್ಳಿ ಬಳಿಯ ಬಾಗೇಗೌಡ ಲೇಔಟ್‌ನಲ್ಲಿ ನೈಸ್ ಕಂಪೆನಿಯು ಪೊಲೀಸರ ಬೆಂಗಾವಲಿನಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಹಲವು ಮನೆಗಳನ್ನು ತೆರವುಗೊಳಿಸಿದ ಘಟನೆ ಇತ್ತೀಚೆಗೆ ನಡೆಯಿತು.ಪ್ರತಿರೋಧ ಒಡ್ಡಿದ ಕೆಲವರನ್ನು ಬಂಧಿಸಲಾಯಿತು;   ಹಲವರನ್ನು ಲಘು ಲಾಠಿ ಪ್ರಹಾರ ಮಾಡಿ ಚದುರಿಸಲಾಯಿತು.

ಮನೆ ತೆರವು ಗೊಳಿಸಲು ನೈಸ್ ಅಧಿಕಾರಿಗಳು ಮುಂದಾದಾಗ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅವರಲ್ಲಿ ಕೆಲವರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಗುಡಿಸಲು, ಮನೆಗಳಲ್ಲದೇ ದೇವಸ್ಥಾನವನ್ನೂ ತೆರವುಗೊಳಿಸುವ ಕಾರ್ಯ ಮುಂದುವರಿಸಿದಾಗ ಮಹಿಳೆಯರು ನ್ಯಾಯ ಕೊಡಿ ಎಂದು ಪ್ರತಿಭಟನೆ ಮಾಡಲು ಪ್ರಾರಂಭಿಸಿದರು. ಆಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದರು.

ಮನೆ ಕಳೆದುಕೊಂಡ ಸಿದ್ದರಾಜು, ಪುಟ್ಟಸ್ವಾಮಿ ಮಾತನಾಡಿ ನಾವು ಮನೆ ಖಾಲಿ ಮಾಡಬೇಕಾದರೆ ಪರಿಹಾರದ ಜತೆ ನಿವೇಶನ ನೀಡಿ ನೊಂದಣಿ ಮಾಡಿಸಿಕೊಡಬೇಕು ಮತ್ತು ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.

‘ಪೊಲೀಸ್ ಮೂಲಗಳ ಪ್ರಕಾರ ಅನಧಿಕೃತವಾಗಿ ನಿರ್ಮಿಸಿರುವ 8 ಮನೆಗಳನ್ನು ನೈಸ್ ಸಂಸ್ಥೆ ತೆರವುಗೊಳಿಸಿದೆ. ಸರ್ಕಾರ ಮತ್ತು ನೈಸ್ ಕಂಪನಿ ಮನವಿ ಮಾಡಿದರಿಂದ ರಕ್ಷಣೆ ನೀಡಿ ಕಾರ್ಯಾಚರಣೆಗೆ ಅಡ್ಡಿ ಮಾಡಿದ್ದ ಕೆಲವರನ್ನು ಬಂಧಿಸಲಾಗಿದೆ’ ಎಂದು ಸಹಾಯಕ ಪೊಲೀಸ್ ಆಯುಕ್ತ ಜಲೀಲ್ ತಿಳಿಸಿದರು. ಕೆಂಪೇಗೌಡ, ಕಿರಣ್, ನಂಜಪ್ಪ, ವಿನಯ್, ಜಯಮ್ಮ, ಸಿದ್ದಲಿಂಗಪ್ಪ ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.