ಬೆಂಗಳೂರು: ‘ದೇಶದ ರಾಜಧಾನಿ ನವದೆಹಲಿ ಪಕ್ಕದಲ್ಲಿನ ನೊಯಿಡಾ ನಗರ ಅಭಿವೃದ್ಧಿಯಾಗಿರುವ ಮಾದರಿಯಲ್ಲಿ ಬೆಂಗಳೂರು ಪಕ್ಕದಲ್ಲಿರುವ ಹೊಸಕೋಟೆಯನ್ನು ಅಭಿವೃದ್ಧಿಪಡಿಸಲಾಗುವುದು. ಇನ್ನು ಕೆಲವು ವರ್ಷಗಳಲ್ಲಿ ಹೊಸಕೋಟೆಯ ಚಿತ್ರಣವೇ ಬದಲಾಗಲಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪಮೊಯಿಲಿ ಹೇಳಿದರು.
ಹೊಸಕೋಟೆಯ ಕಂಬಳೀಪುರದಲ್ಲಿ ರಾಜೀವ್‌ಗಾಂಧಿ ಪೆಟ್ರೋಲಿಯಂ ಸಂಶೋಧನಾ ಕೇಂದ್ರಕ್ಕೆ ಬುಧವಾರ ಶಿಲಾನ್ಯಾಸ ಮಾಡಿದ ನಂತರ ಅವರು ಮಾತನಾಡಿದರು.
‘ಇಲ್ಲಿ ನಿರ್ಮಾಣವಾಗುವ ಪೆಟ್ರೋಲಿಯಂ ಸಂಶೋಧನಾ ಕೇಂದ್ರ ಇಡಿ ಜಗತ್ತಿನಲ್ಲೇ ಶ್ರೇಷ್ಠ ಸಂಸ್ಥೆಯಾಗಲಿದೆ. ಈ ಕೇಂದ್ರದಲ್ಲಿ ಪೆಟ್ರೋಲ್ ಬಗ್ಗೆ ಸಂಶೋಧನೆ, ಅಧ್ಯಯನ ನಡೆಯಲಿದೆ ಜತೆಗೆ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ತರಬೇತಿ ನೀಡಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ 150 ಎಕರೆ ಜಮೀನು ನೀಡಿದೆ. ₨ 120 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ನಿರ್ಮಾಣವಾಗಲಿದೆ’ ಎಂದರು.
‘ಹೊಸಕೋಟೆಯಲ್ಲಿ ಆರಂಭವಾಗುವ ಪೆಟ್ರೋಲಿಯಂ ಸಂಶೋಧನಾ ಕೇಂದ್ರದಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ. ಅವರು ನೀಡಿರುವ ವರದಿ ಆಧರಿಸಿ ಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.