ಬೆಂಗಳೂರು: `ನ್ಯಾನೊ ಕಾರಿನಲ್ಲಿ ನಗರಕ್ಕೆ ಬಂದವರು ಶಂಕಿತ ಉಗ್ರರಲ್ಲ. ಅವರು ಗುಜರಾತ್ ಮೂಲದ ವ್ಯಾಪಾರಿಗಳು' ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಸ್ಪಷ್ಟಪಡಿಸಿದ್ದಾರೆ.
ನಗರದ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನ್ಯಾನೊ ಕಾರಿನಲ್ಲಿ ಶಂಕಿತ ಉಗ್ರರು ನಗರಕ್ಕೆ ನುಸುಳಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯು ಬೆಂಗಳೂರು ಪೊಲೀಸರಿಗೆ ಸಂದೇಶ ರವಾನಿಸಿದೆ ಎಂಬ ಸುದ್ದಿ ಶನಿವಾರ (ಜೂ.15) ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಯಿತು.
ಆದರೆ, ಗುಪ್ತಚರ ಇಲಾಖೆಯಿಂದ ಅಂತಹ ನಿರ್ದಿಷ್ಟ ಎಚ್ಚರಿಕೆ ಬಂದಿರಲಿಲ್ಲ. ಅದೇ ದಿನ ನಾಗರಿಕರೊಬ್ಬರು ಕರೆ ಮಾಡಿ ಯಾರೊ ನ್ಯಾನೊ ಕಾರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದಾರೆ ಎಂದು ಹೇಳಿದ್ದರು. ಆ ಮಾಹಿತಿ ಆಧರಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿತ್ತು. ಮಂಗಳವಾರ ಬೆಳಿಗ್ಗೆ ಆ ಕಾರನ್ನು ಪತ್ತೆ ಮಾಡಲಾಗಿದೆ. ಆದರೆ, ಅದರಲ್ಲಿದ್ದ ಇಬ್ಬರೂ ಗುಜರಾತ್ ಮೂಲದ ವ್ಯಾಪಾರಿಗಳಾಗಿದ್ದು, ಅವರು ಅಮಾಯಕರು' ಎಂದರು.
`ಆ ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಅವರು ತಮ್ಮನ್ನು ವ್ಯಾಪಾರಿಗಳೆಂದು ಹೇಳಿಕೊಂಡರು. ಅಲ್ಲದೇ, ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದಾಗ ವ್ಯಾಪಾರದ ಉದ್ದೇಶದಿಂದಲೇ ಅವರು ನಗರಕ್ಕೆ ಬಂದಿರುವುದು ಖಚಿತವಾಯಿತು' ಎಂದು ಮಿರ್ಜಿ ಹೇಳಿದರು.
`ಮಾದ್ಯಮಗಳಲ್ಲಿ ಪ್ರಸಾರವಾದ ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ನ್ಯಾನೊ ಕಾರು (ಜಿಜೆ 05 ಸಿಆರ್ 53) ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾಯಂಡಹಳ್ಳಿ ವೃತ್ತ ಮಾರ್ಗವಾಗಿ ಚಲಿಸಿದೆ. ಆ ಕಾರಿನ ನೋಂದಣಿ ಸಂಖ್ಯೆ ಗಮನಿಸಿ ಎಚ್ಚೆತ್ತುಕೊಂಡು ಸಿಬ್ಬಂದಿ, ಕೂಡಲೇ ಬ್ಯಾಟರಾಯನಪುರ ಸಂಚಾರ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು.
ಠಾಣೆಯ ಸಿಬ್ಬಂದಿ ಕೂಡಲೇ ಬಿಎಚ್‌ಇಎಲ್ ವೃತ್ತದಲ್ಲಿ ಬ್ಯಾರಿಕೇಡ್‌ಗಳಿಂದ ರಸ್ತೆಯನ್ನು ಬ್ಲಾಕ್ ಮಾಡಿ, ನ್ಯಾನೊ ಕಾರನ್ನು ವಶಕ್ಕೆ ಪಡೆದರು' ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.