ADVERTISEMENT

`ನ್ಯಾಯಾಂಗ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕಿದೆ'

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಬೆಂಗಳೂರು: ಸಾರ್ವಜನಿಕರಿಗೆ ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ನ್ಯಾಯಾಂಗವು ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ. ವಿ.ಎಸ್.ಮಳಿಮಠ ಅಭಿಪ್ರಾಯಪಟ್ಟರು. ನ್ಯಾಯ ಶಾಸ್ತ್ರಜ್ಞರ ಅಂತರರಾಷ್ಟ್ರೀಯ ಆಯೋಗದ ಕರ್ನಾಟಕದ ಘಟಕ ನಗರದ ಭಾರತೀಯ ವಿದ್ಯಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ವಿ.ಸುಧೀಶ್ ಪೈ ರಚಿತ `ಲಿಜೆಂಡ್ಸ್ ಇನ್ ಲಾ' ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಇಂದು ಉನ್ನತ ನ್ಯಾಯಾಂಗ ವ್ಯವಸ್ಥೆಯೂ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತವಾಗಿಲ್ಲ. ನ್ಯಾಯಾಂಗದ ಮೇಲೆ ಜನರು ವಿಶ್ವಾಸ ಕಳೆದುಕೊಂಡರೆ ಸಮಾಜದಲ್ಲಿ ಅರಾಜಕತೆ ನಿರ್ಮಾಣವಾಗಲಿದೆ. ನ್ಯಾಯಾಧೀಶರು ಇತ್ಯರ್ಥಪಡಿಸಿರುವ ಒಟ್ಟು ಪ್ರಕರಣಗಳಿಗಿಂತಲೂ, ಎಷ್ಟು ಪ್ರಕರಣಗಳಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗಿದೆ ಎಂಬುದು ಮುಖ್ಯವಾಗಲಿದೆ ಎಂದು ತಿಳಿಸಿದರು.

ಕೃತಿ ಒಟ್ಟು 42 ಕಾನೂನು ಶಾಸ್ತ್ರಜ್ಞರ ದಂತಕತೆಗಳನ್ನು ಒಳಗೊಂಡಿದೆ. ಬಿ.ನರಸಿಂಗರಾವ್ ಕುರಿತ ಕತೆಯಲ್ಲಿ ಅವರು ಕನ್ನಡಿಗರಾಗಿದ್ದರು ಎಂಬ ಮುಖ್ಯವಾದ ಅಂಶವನ್ನೇ ತಿಳಿಸಲಾಗಿಲ್ಲ. ಅವರು ಸಂವಿಧಾನದ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಷ್ಟೇ ಪಾತ್ರವನ್ನು ನಿರ್ವಹಿಸಿದ್ದಾರೆ. ಅಂಬೇಡ್ಕರ್ ಅವರನ್ನು `ಸಂವಿಧಾನದ ಪಿತಾಮಹ' ಎಂದು, ನರಸಿಂಗರಾವ್ ಅವರನ್ನು `ಸಂವಿಧಾನದ ತಾಯಿ' ಎಂದು ಕರೆದರೆ ತಪ್ಪಾಗಲಾರದು ಎಂದರು.

ದಿವಂಗತರ ಬಗೆಗಿನ ದಂತ ಕತೆಗಳಲ್ಲದೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಕಾನೂನು ಶಾಸ್ತ್ರಜ್ಞರ ದಂತೆ ಕತೆಗಳನ್ನೂ ರಚಿಸುವ ಅಗತ್ಯವಿದೆ. ಆಡಳಿತಾತ್ಮಕ ನೈಪುಣ್ಯತೆಯಿಂದ ರಚಿತವಾಗಿರುವ ಈ ಕೃತಿ ಹೊಸ ಪೀಳಿಗೆಯವರಲ್ಲಿ ಆಶಾ ಭಾವನೆ ಮೂಡಿಸಲು ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ನ್ಯಾಯಮೂರ್ತಿಗಳಾದ ಎಸ್.ರಾಜೇಂದ್ರ ಬಾಬು, ಎಂ.ಎನ್. ವೆಂಕಟಾಚಲಯ್ಯ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.