ADVERTISEMENT

ನ್ಯಾಯಾಧೀಶರ ಕಾಲೋನಿ: ಗುತ್ತಿಗೆದಾರರ ವೆಚ್ಚ ಪಾವತಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST

ಬೆಂಗಳೂರು: ನಗರದ ಎಚ್‌ಎಸ್‌ಆರ್ ಬಡಾವಣೆಯ ಆಟದ ಮೈದಾನದಲ್ಲಿ ನ್ಯಾಯಾಧೀಶರ ಕಾಲೋನಿ ನಿರ್ಮಿಸಲು ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರು ವೆಚ್ಚ ಮಾಡಿರುವ ಪೂರ್ಣ ಮೊತ್ತವನ್ನು ಎರಡು ತಿಂಗಳೊಳಗೆ ಸಂದಾಯ ಮಾಡುವಂತೆ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಆಟದ ಮೈದಾನದಲ್ಲಿ ನ್ಯಾಯಾಧೀಶರ ಕಾಲೋನಿ ನಿರ್ಮಾಣ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ, ಗುತ್ತಿಗೆದಾರರು ವೆಚ್ಚ ಮಾಡಿರುವ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿತು.

ಆಟದ ಮೈದಾನದಲ್ಲಿ ನ್ಯಾಯಾಧೀಶರ ಕಾಲೋನಿ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗ್ರೊ ಕೈಗಾರಿಕಾ ನಿಗಮದ ಆವರಣದಲ್ಲಿ 16 ವಸತಿ ಗೃಹಗಳನ್ನು ನಿರ್ಮಿಸಿ, ಹಸ್ತಾಂತರಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್‌ಎಸ್‌ಆರ್ ಬಡಾವಣೆ ಆಟದ ಮೈದಾನದಲ್ಲಿ ಕಾಮಗಾರಿ ಕೈಗೊಂಡಿದ್ದ ಗುತ್ತಿಗೆದಾರರಿಗೆ ಬಾಕಿ ಪಾವತಿಗೆ ಆದೇಶ ನೀಡಲಾಗಿದೆ.

ADVERTISEMENT

ಪ್ರಕರಣ ಬಾಕಿ: ಈ ಮಧ್ಯೆ 16 ವಸತಿ ಗೃಹಗಳ ಹಸ್ತಾಂತರ ಆಗುವವರೆಗೆ ಪ್ರಕರಣವನ್ನು ಇತ್ಯರ್ಥಗೊಳಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸ್ಪಷ್ಟವಾಗಿ ಹೇಳಿದರು. ವಸತಿ ಗೃಹಗಳು ನ್ಯಾಯಾಂಗ ಇಲಾಖೆಯ ಕೈಸೇರಿದ ಬಳಿಕವೇ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು ಎಂದು ಮಂಗಳವಾರದ ವಿಚಾರಣೆ ವೇಳೆ ತಿಳಿಸಿದರು.

‘ಲೋಟ ಮತ್ತು ತುಟಿಯ ನಡುವೆ ವ್ಯತ್ಯಾಸ (ಸ್ಲಿಪ್ ಬಿಟ್ವೀನ್ ಕಪ್ ಅಂಡ್ ಲಿಪ್) ಆಗುವುದು ಬೇಡ. ಅಂತಹ ಬೆಳವಣಿಗೆಯನ್ನು ನಾವು ಬಯಸುವುದೂ ಇಲ್ಲ’ ಎಂದು ನ್ಯಾ.ಕೇಹರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.