ADVERTISEMENT

ನ್ಯಾ.ರಂಗವಿಠಲಾಚಾರ್ ತನಿಖಾ ಸಮಿತಿ?

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕೋಲಾರ ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಗವಿಠಲಾಚಾರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಿರುವ ಸರ್ಕಾರ, ಈ ನಿರ್ಧಾರಕ್ಕೆ ಅನುಮೋದನೆ ನೀಡುವಂತೆ ವಿ.ವಿ. ಕುಲಾಧಿಪತಿಗಳೂ ಆದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಶಿಫಾರಸು ಮಾಡಿದೆ.

ಸಿಂಡಿಕೇಟ್ ಸದಸ್ಯರಾದ ಡಾ.ಕೆ.ವಿ.ಆಚಾರ್ಯ, ಟಿ.ಎಚ್.ಶ್ರೀನಿವಾಸಯ್ಯ, ಡಿ.ಎಸ್.ಕೃಷ್ಣ, ಸಿ.ಕೆ.ಜಗದೀಶ್ ಪ್ರಸಾದ್, ಡಾ.ಮಾನಸ ನಾಗಭೂಷಣಂ, ಜಹೀದಾ ಮುಲ್ಲಾ ಅವರು ಜುಲೈ 21ರಂದು ನಡೆದ ಸಭೆಯಲ್ಲಿ ಕಾಮಗಾರಿ ನಿಲ್ಲಿಸಲು ಒತ್ತಾಯಿಸಿದ್ದರು. ಇವರ ಮಾತನ್ನೂ ಕಡೆಗಣಿಸಿ ವಿ.ವಿ.ಯ ಆಡಳಿತವು ಕಟ್ಟಡವನ್ನು ಪೂರ್ಣಗೊಳಿಸಲು ನಿರ್ಧರಿಸಿತ್ತು.

ಈ ನಿರ್ಧಾರವನ್ನು ವಿರೋಧಿಸಿದ ಸದಸ್ಯರು ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರಿಗೆ ಪತ್ರ ಬರೆದಿದ್ದರು.

ಈ ಪತ್ರದ ಹಿನ್ನೆಲೆಯಲ್ಲಿ ಡಾ.ಆಚಾರ್ಯ ಅವರು ತನಿಖಾ ಸಮಿತಿ ನೇಮಕ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ-2000, ಕಾಯ್ದೆಯ ಕಲಂ 8ರ ಅನ್ವಯ ರಾಜ್ಯಪಾಲರ ಆದೇಶದ ಮೇರೆಗೆ ವಿ.ವಿ. ಅಧಿಕಾರಿಗಳು ನಡೆಸಿದ ಅವ್ಯವಹಾರಗಳನ್ನು ತನಿಖೆ ನಡೆಸಬಹುದಾಗಿದೆ. ಅದೇ ಕಾಯ್ದೆಯ ಕಲಂ 14 (8)ರ ಅನ್ವಯ ವಿ.ವಿ.ಕುಲಪತಿಗಳ ವಿರುದ್ಧ ಆರೋಪಗಳು ಕೇಳಿ ಬಂದಲ್ಲಿ ರಾಜ್ಯ ಸರ್ಕಾರವೇ ವಿಚಾರಣೆ ನಡೆಸಬಹುದಾಗಿದೆ.

ಸಚಿವ ಆಚಾರ್ಯ ಅವರು ಈ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಕುಲಸಚಿವರು ಮತ್ತು ಹಣಕಾಸು ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣರಾವ್ ಅವರಿಗೆ ಪತ್ರ ಬರೆದಿದ್ದರು.
ವಿ.ವಿ.ಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯಪಾಲರ ಒಪ್ಪಿಗೆ ಅನಿವಾರ್ಯ. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಆಗಸ್ಟ್ 23ರಂದು ರಾಜ್ಯಪಾಲರಿಗೆ ಕಳುಹಿಸಿದ ಶಿಫಾರಸು ಪತ್ರದಲ್ಲಿ `ಹಣಕಾಸಿನ ಅವ್ಯವಹಾರದ ಆರೋಪಗಳಿರುವುದನ್ನು ನಮೂದಿಸಿ, ಸೆಕ್ಷನ್ 8ರ ಅನ್ವಯ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಶಿಫಾರಸು ಮಾಡುವುದು.

ಈ ಸಮಿತಿಗೆ ರಂಗವಿಠಲಾಚಾರ್ ಅವರನ್ನು ನೇಮಕ ಮಾಡಲು ಸಹ ಶಿಫಾರಸಿನಲ್ಲಿ ಸೇರಿಸಬೇಕು~ ಎಂದು ಸೂಚಿಸಲಾಗಿದೆ. ರಾಜ್ಯಪಾಲರು ಅನುಮೋದನೆ ನೀಡಿದ ನಂತರವಷ್ಟೇ ತನಿಖಾ ಸಮಿತಿ ರಚನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.