ADVERTISEMENT

ಪತ್ನಿಗೆ ಚಾಕು ಇರಿದು ಠಾಣೆಗೆ ಶರಣಾದ!

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 19:30 IST
Last Updated 27 ಫೆಬ್ರುವರಿ 2018, 19:30 IST

ಬೆಂಗಳೂರು: ಅನೈತಿಕ ಸಂಬಂಧದ ಸಂಶಯದಲ್ಲಿ ಪತ್ನಿ ಮೇಲೆ 12 ಸಲ ಚಾಕುವಿನಿಂದ ಹಲ್ಲೆ ನಡೆಸಿರುವ ಆಟೊ ಚಾಲಕ ನದೀಂ ಪಾಷಾ (28), ನಂತರ ಅಶೋಕನಗರ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಆನೇಪಾಳ್ಯ ಮುಖ್ಯರಸ್ತೆಯ ಸೆಲ್ವಾಸ್ ಮೈದಾನದ ಬಳಿ ಫೆ.24ರಂದು ಈ ಕೃತ್ಯ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಯೇಷಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೀಲಸಂದ್ರದ ಆಯೇಷಾ, ಐದು ವರ್ಷಗಳ ಹಿಂದೆ ನದೀಂನನ್ನು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಆರು ತಿಂಗಳ ಹೆಣ್ಣು ಮಗುವಿದೆ. ಆರೋಪಿಯು ನಡುರಸ್ತೆಯಲ್ಲೇ ಪತ್ನಿಯ ತೊಡೆ ಹಾಗೂ ಬೆನ್ನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕುಸಿದುಬಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಮಧ್ಯಾಹ್ನ 1 ಗಂಟೆ ಸುಮಾರಿಗೆ ಠಾಣೆಗೆ ಬಂದ ನದೀಂ, ‘ಸರ್, ನನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದೇನೆ’ ಎಂದು ಹೇಳಿದ. ತಕ್ಷಣ ಆತನನ್ನು ಕರೆದುಕೊಂಡು ಕೃತ್ಯ ಎಸಗಿದ ಸ್ಥಳಕ್ಕೆ ಹೋದೆವು. ಅಲ್ಲಿ ಸ್ಥಳೀಯರಿಂದ ಮಾಹಿತಿ ಪಡೆದು ಆಸ್ಪತ್ರೆಗೆ ತೆರಳಿದೆವು. ಆಯೇಷಾ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ಹೇಳಿದರು. ನಂತರ ಕೊಲೆ ಯತ್ನ (ಐಪಿಸಿ 307) ಆರೋಪದಡಿ ನದೀಂನನ್ನು ಬಂಧಿಸಿದೆವು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಯೇಷಾ ಹೇಳಿದ್ದೇನು: ‘ಪತಿ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಗಂಡನನ್ನು ಹುಡುಕಿಕೊಂಡು ಮನೆ ಹತ್ತಿರ ಬರುತ್ತಿದ್ದ ಸಾಲಗಾರರಿಗೆ, ಏನೋ ಸಬೂಬು ಹೇಳಿ ಕಳುಹಿಸುತ್ತಿದ್ದೆ. ಆದರೆ, ನಾನು ಅವರೊಟ್ಟಿಗೆ ಸಂಬಂಧ ಇಟ್ಟುಕೊಂಡಿರುವಂತೆ ಪತಿ ಸಂಶಯ ಪಟ್ಟಿದ್ದರು’ ಎಂದು ಆಯೇಷಾ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.

‘ಪತಿಯಿಂದ ಸಾಲ ಪಡೆದಿದ್ದ ವ್ಯಕ್ತಿಯೊಬ್ಬ, ಫೆ.23ರ ಬೆಳಗಿನ ಜಾವ 4.30ರ ಸುಮಾರಿಗೆ ಮನೆ ಹತ್ತಿರ ಬಂದಿದ್ದ. ಆತ ಹೋದ ಬಳಿಕ ಜಗಳ ಶುರು ಮಾಡಿದ ಪತಿ, ‘ಅವನು ಏಕೆ ಬಂದಿದ್ದ? ನಿನಗೂ ಅವನಿಗೂ ಏನು ಸಂಬಂಧ?’ ಎಂದು ಜಗಳ ಪ್ರಾರಂಭಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾಲಿನಿಂದ ಒದ್ದರು. ಇದರಿಂದ ಬೇಸರವಾಗಿ ನಾನು ತವರು ಮನೆಗೆ ಹೊರಟು ಹೋಗಿದ್ದೆ.’

‘ಮರುದಿನ ಬೆಳಿಗ್ಗೆ 11 ಗಂಟೆಗೆ ಅಲ್ಲಿಗೂ ಬಂದ ಪತಿ, ‘ಆರು ತಿಂಗಳ ಮಗುವನ್ನು ಬಿಟ್ಟು ಬಂದಿದ್ದೀಯಲ್ಲ. ಹಾಲು ಕುಡಿಸಿ ಹೋಗುವಂತೆ ಬಾ’ ಎಂದರು. ಮಗುವಿಗೋಸ್ಕರ ಬೈಕ್ ಹತ್ತಿಕೊಂಡು ಅವರ ಜತೆ ಹೊರಟು ಬಂದೆ. ಮನೆಗೆ ಹೋಗುವ ಬದಲಾಗಿ, ಬೇರೆ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಪ್ರಶ್ನೆ ಮಾಡಿದೆ. ಆಗ, ‘ನಿನ್ನನ್ನು ಸಾಯಿಸುವುದಕ್ಕೇ ಕರೆದುಕೊಂಡು ಹೋಗುತ್ತಿದ್ದೇನೆ’ ಎಂದರು. ನಾನು ರಕ್ಷಣೆಗೆ ಕಿರುಚಾಡಿದಾಗ, ಬೈಕ್ ನಿಲ್ಲಿಸಿ ಚಾಕುವಿನಿಂದ ಹಲ್ಲೆ ನಡೆಸಿದರು’ ಎಂದು ಆಯೇಷಾ ಹೇಳಿಕೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.