ADVERTISEMENT

ಪರಿಣಾಮಕಾರಿ ಸಂಘಟನೆಗೆ ಪ್ರೇರಣೆ

ಜೆ.ಆರ್.ಗಿರೀಶ್
Published 20 ನವೆಂಬರ್ 2011, 19:30 IST
Last Updated 20 ನವೆಂಬರ್ 2011, 19:30 IST
ಪರಿಣಾಮಕಾರಿ ಸಂಘಟನೆಗೆ ಪ್ರೇರಣೆ
ಪರಿಣಾಮಕಾರಿ ಸಂಘಟನೆಗೆ ಪ್ರೇರಣೆ   

ಬೆಂಗಳೂರು: `ರಾಜ್ಯದಲ್ಲಿ ಮೊದಲ ಬಾರಿಗೆ ನಡೆದ ರಾಷ್ಟ್ರೀಯ ಕೃಷಿ ಮೇಳಕ್ಕೆ ರೈತರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದ್ದು, ಮೇಳ ಯಶಸ್ವಿಯಾಗಿರುವುದಕ್ಕೆ ಸಂತಸವಾಗುತ್ತಿದೆ~.

-ಇದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ ಅವರ ಮನದಾಳದ ಮಾತು. ಬೆಂಗಳೂರು ಕೃಷಿ ವಿ.ವಿಯು ಮೊದಲ ಬಾರಿಗೆ ಆಯೋಜಿಸಿದ ರಾಷ್ಟ್ರೀಯ ಕೃಷಿ ಮೇಳಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿರುವುದು ಕುಲಪತಿ ಅವರಲ್ಲಿ ಸಾರ್ಥಕ ಭಾವ ಮೂಡಿಸಿದೆ. ಅವರೊಂದಿಗೆ `ಪ್ರಜಾವಾಣಿ~ ನಡೆಸಿದ ವಿಶೇಷ ಸಂದರ್ಶನದ ವಿವರ ಹೀಗಿದೆ.

* ಮೇಳಕ್ಕೆ ರೈತರು ಹಾಗೂ ಕೃಷಿ ಉತ್ಪನ್ನ ಆಧಾರಿತ ಉದ್ದಿಮೆದಾರರಿಂದ ಯಾವ ರೀತಿಯ ಸ್ಪಂದನೆ ವ್ಯಕ್ತವಾಗಿದೆ?
ರಾಜ್ಯವಷ್ಟೇ ಅಲ್ಲದೇ ದೇಶದ ವಿವಿಧ ರಾಜ್ಯಗಳ ರೈತರು ಕೃಷಿ ಮೇಳದಲ್ಲಿ ಪಾಲ್ಗೊಂಡು ಮಾಹಿತಿ ಪಡೆದಿದ್ದಾರೆ. ಐದು ದಿನಗಳಲ್ಲಿ ಸುಮಾರು 10 ಲಕ್ಷ ರೈತರು ಮೇಳದಲ್ಲಿ ಭಾಗಿಯಾಗಿದ್ದಾರೆ. ಅಂತೆಯೇ ಕೃಷಿ ಆಧಾರಿತ ಉದ್ದಿಮೆದಾರರಿಂದಲೂ ನಿರೀಕ್ಷೆಗೂ ಮೀರಿದ ಮೆಚ್ಚುಗೆ ವ್ಯಕ್ತವಾಗಿದೆ.
ರಾಷ್ಟ್ರೀಯ ಮಟ್ಟದ ಮೇಳ ಆಯೋಜಿಸಿದ ಮೊದಲ ಪ್ರಯತ್ನದಲ್ಲೇ ಸಾಕಷ್ಟು ಯಶ ಕಂಡಿರುವುದರಿಂದ ಮುಂದೆ ಆಯೋಜಿಸಲಾಗುವ ಕೃಷಿ ಮೇಳಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸಂಘಟಿಸಲು ಪ್ರೇರಣೆ ಸಿಕ್ಕಿದೆ.

* ಮೇಳದ ಮೂಲ ಉದ್ದೇಶಗಳು ಸಾಕಾರಗೊಂಡಿವೆಯೇ?
ರಾಷ್ಟ್ರ ಹಾಗೂ ಹೊರ ರಾಷ್ಟ್ರಗಳ ಕೃಷಿ ತಂತ್ರಜ್ಞಾನವನ್ನು ಕ್ರೋಡೀಕರಿಸಿ ಆ ಬಗ್ಗೆ ರೈತರಿಗೆ ಅರಿವು ಮೂಡಿಸುವುದು, ರೈತರ ಅನುಭವಗಳ ವಿನಿಮಯ ಮತ್ತು ಕೃಷಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿತ್ತು.

ಆ ಉದ್ದೇಶಗಳು ಈಡೇರಿವೆ. ಕೃಷಿ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ರೈತಾಪಿ ವರ್ಗಕ್ಕೆ ಪ್ರೇರಣೆಯಾಗಿದೆ. ಕೃಷಿ ತಂತ್ರಜ್ಞಾನದ ಅರಿವು ರೈತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

* ದೇಶದ ಆಹಾರ ಸ್ವಾವಲಂಬನೆಗೆ ಕೃಷಿ ಮೇಳದ ಪಾತ್ರವೇನು?
ಸುಮಾರು 124 ಕೋಟಿಯಷ್ಟು ಜನಸಂಖ್ಯೆ ಇರುವ ಭಾರತದಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಬಹಳ ಮುಖ್ಯ. ಪ್ರತಿ ಜೀವಿಗೂ ಆಹಾರ ಅತ್ಯಗತ್ಯ. ಆಹಾರದ ಕೊರತೆ ಬೇರೆ ರೀತಿಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ ಮತ್ತು ದೇಶದ ಅರ್ಥ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದರೆ ಇತರೆ ರಾಷ್ಟ್ರಗಳ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ದಿಸೆಯಲ್ಲಿ ಇಂತಹ ಕೃಷಿ ಮೇಳದ ಪಾತ್ರ ಮಹತ್ವದ್ದು. ಆಹಾರ ಪದಾರ್ಥಗಳ ಉತ್ಪಾದನೆ ಹೆಚ್ಚಿಸುವಲ್ಲಿ ಕೃಷಿ ಮೇಳಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

* ಕೃಷಿ ಮೇಳ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಹೇಗೆ ಸಹಕಾರಿ?
 ಕೃಷಿ ಸಾಲ ನೀತಿಯನ್ನು ಸಡಿಲಿಸಿ ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ಮಾಡುವುದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಪ್ರತಿನಿಧಿಗಳು ಮೇಳದಲ್ಲಿ ಭರವಸೆ ನೀಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ರೈತರು ಕೃಷಿ ಸಾಲದ ಸದುಪಯೋಗ ಪಡೆದುಕೊಳ್ಳಬಹುದು.

ನೂತನ ಕೃಷಿ ತಂತ್ರಜ್ಞಾನ ಮತ್ತು ಪರಿಣತರ ಅನುಭವಗಳನ್ನು ಆಧರಿಸಿ ಸುಧಾರಿತ ಕೃಷಿ ಮಾಡಬಹುದು. ಇದರಿಂದ ಆದಾಯ ಗಳಿಕೆ ಪ್ರಮಾಣ ಹೆಚ್ಚಿ ರೈತರ ಜೀವನ ಮಟ್ಟವೂ ಸುಧಾರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.