ADVERTISEMENT

ಪರಿಶುದ್ಧ ರಾಜಕಾರಣಕ್ಕೆ ಲೋಕಸತ್ತಾ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:42 IST
Last Updated 20 ಏಪ್ರಿಲ್ 2013, 19:42 IST

ಬೆಂಗಳೂರು: `ಲೋಕಸತ್ತಾ ಪಕ್ಷದ ಅಭ್ಯರ್ಥಿಗಳು ಹಣ, ಜಾತಿ ಹಾಗೂ ತೋಳ್ಬಲವನ್ನು ಹೊಂದಿಲ್ಲ. ಆದರೆ, ಚುನಾವಣೆಯಲ್ಲಿ ಗೆದ್ದರೂ, ಸೋತರೂ ಜನಸೇವೆಗೆ ಸದಾ ಬದ್ಧರಾಗಿದ್ದಾರೆ' ಎಂದು ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ಹೇಳಿದರು.

ಲೋಕಸತ್ತಾ ಪಕ್ಷದ ರಾಜ್ಯ ಘಟಕ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿಗಳಿಗೆ  `ಯಾವುದೇ ಅನೈತಿಕ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗುವುದಿಲ್ಲ' ಎಂಬ ಪ್ರಮಾಣ ವಚನವನ್ನು ಅವರು ಬೋಧಿಸಿ, ಮಾತನಾಡಿದರು. 

`ರಾಜ್ಯದಲ್ಲಿ ಈವರೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಬಡ ಜನರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ನೀಡಲು ಅವುಗಳಿಂದ ಸಾಧ್ಯವಾಗಿಲ್ಲ. ಜನರಿಂದ ತೆರಿಗೆ ಮೂಲಕ ಸಂಗ್ರಹಿಸಲಾದ ಹಣವನ್ನು ಅಭಿವೃದ್ಧಿಯ ಹೆಸರಿನಲ್ಲಿ ಸ್ವಹಿತಾಸಕ್ತಿಗಾಗಿ ಬಳಸಿಕೊಂಡಿದ್ದಾರೆ. ಲೋಕಸತ್ತಾ ಪಕ್ಷದಿಂದ ಶೇ 1ರಷ್ಟು ಮಂದಿಗೆ ವಿಧಾನಸಭೆ ಪ್ರವೇಶ ದೊರೆತರೆ ಜನರಿಗೆ ನಿಜವಾದ ಸ್ವಾತಂತ್ರ್ಯವನ್ನು ನೀಡುವ ಪ್ರಯತ್ನ ಮಾಡುತ್ತೇವೆ' ಎಂದು ಭರವಸೆ ನೀಡಿದರು.  

`ಗ್ರಾಮೀಣ ಪ್ರದೇಶಕ್ಕೆ 24 ಗಂಟೆ ವಿದ್ಯುತ್, ಎಲ್ಲಾ ಜನರಿಗೆ ಕುಡಿಯುವ ನೀರು ಪೂರೈಕೆ, ಸಕಾಲ ಯೋಜನೆಯನ್ನು ಎಲ್ಲಾ ಇಲಾಖೆಗಳಿಗೆ ವಿಸ್ತರಿಸುವುದು, ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವುದು, ಅಧಿಕಾರದ ವಿಕೇಂದ್ರೀಕರಣ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ಪಕ್ಷದ ಮುಖ್ಯ ಗುರಿಯಾಗಿದೆ' ಎಂದರು.

`ಬೆಂಗಳೂರು ನಗರ ವ್ಯಾಪ್ತಿಯಲ್ಲಿ 11 ಅಭ್ಯರ್ಥಿಗಳು ಸೇರಿದಂತೆ ಒಟ್ಟು 26 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಪ್ರಜ್ಞಾವಂತ ಮತದಾರರು ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಶ್ವಾಸವಿದೆ' ಎಂಬ ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.