ADVERTISEMENT

ಪರ್ಯಾಯ ಅರಣ್ಯ: ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಬೆಂಗಳೂರು: `ಅಭಿವೃದ್ಧಿ ಕಾಮಗಾರಿಗಳಿಂದ ಅರಣ್ಯ ಪ್ರಮಾಣ ಕಡಿಮೆಯಾಗುವುದನ್ನು ತಪ್ಪಿಸಲು ಕಾಮಗಾರಿ ಆರಂಭಕ್ಕೂ ಮುನ್ನ ಪರ್ಯಾಯ ಅರಣ್ಯ ನಿರ್ಮಾಣವನ್ನು ಸರ್ಕಾರ ಕಡ್ಡಾಯಗೊಳಿಸಬೇಕು~ ಎಂದು ಹಿರಿಯ ನೀರಾವರಿ ತಜ್ಞ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಒತ್ತಾಯಿಸಿದರು.

ನಗರದ ಅರಣ್ಯ ಭವನದಲ್ಲಿ ಬುಧವಾರ ವಿಶ್ವ ಅರಣ್ಯ ದಿನದ ಅಂಗವಾಗಿ ಆಯೋಜಿಸಿದ್ದ `ಜೀವ ಜಲದ ಮೂಲ ಅರಣ್ಯ~ ವಿಷಯದ ಅಂತರ ಕಾಲೇಜು ಚರ್ಚಾಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಮಧ್ಯಮ ಹಾಗೂ ಬೃಹತ್ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳು ಎಲ್ಲಿಯೇ ನಡೆದರೂ ಅರಣ್ಯ ಪ್ರದೇಶ ಬಲಿಯಾಗಬೇಕಾಗುತ್ತದೆ. ಹಾಗಾಗಿ ಪರ್ಯಾಯ ಅರಣ್ಯ ಬೆಳೆಸಲು ಸರ್ಕಾರ ಕಾನೂನುಗಳನ್ನು ರೂಪಿಸಬೇಕು. ಕಾಮಗಾರಿ ಆರಂಭಕ್ಕೂ ಮುನ್ನ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯುವ ಸಂದರ್ಭವನ್ನೇ ಆಧಾರವಾಗಿಟ್ಟುಕೊಂಡು ಸರ್ಕಾರವು ಕಾಮಗಾರಿ ನಡೆಯುವ ಪ್ರದೇಶದಲ್ಲಿ ಈ ಹಿಂದೆ ಇದ್ದಷ್ಟು ಅರಣ್ಯ ಬೆಳೆಸುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲವಾದರೆ ಅಭಿವೃದ್ಧಿಯ ಕಾರಣಕ್ಕೆ ಅರಣ್ಯ ಪ್ರದೇಶವೇ ಇಲ್ಲದಂತಾಗುತ್ತದೆ~ ಎಂದು ಅವರು ಕಳವಳ ವ್ಯಕ್ತ ಪಡಿಸಿದರು.

ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಮಾತನಾಡಿ, `ಅರಣ್ಯ ಭೂಮಿಯ ಒತ್ತುವರಿ ಪ್ರಕರಣಗಳಿಗಾಗಿ ಪ್ರತ್ಯೇಕ ತ್ವರಿತಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಬೇಕು~ ಎಂದು  ಒತ್ತಾಯಿಸಿದರು.

ಬೆಂಗಳೂರು ಪರಿಸರ ಟ್ರಸ್ಟ್‌ನ ಅಧ್ಯಕ್ಷ ಕ್ಯಾಪ್ಟನ್ ಪ್ರಬಲ ಅವರು ವೈ.ಕೆ. ಮೋಹನ್ ಅವರ `ಒಂದು ಮರದ ವ್ಯಥೆಯ ಕಥೆ~ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಚರ್ಚಾ ಸ್ಪರ್ಧೆಯಲ್ಲಿ  ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
 ಸಿ.ಎಸ್.ರಾಜು, ಬಿ.ಎನ್.ಸುರೇಶ್ವರ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.