ADVERTISEMENT

ಪರ್ಯಾಯ ಒಕ್ಕೂಟಕ್ಕೆ ವಿರೋಧ

‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾನ್ಯತೆ ಬೇಡ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 20:11 IST
Last Updated 5 ಮಾರ್ಚ್ 2014, 20:11 IST

ಬೆಂಗಳೂರು: ‘ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟಕ್ಕೆ  ಪರ್ಯಾಯವಾಗಿ ರಚಿಸಿ­ಕೊಂಡಿ­ರುವ ಒಕ್ಕೂಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಮಾನ್ಯತೆ ನೀಡಬಾರದು’ ಎಂದು ಒಕ್ಕೂಟದ ಅಧ್ಯಕ್ಷ ಅಶೋಕ್‌ ಒತ್ತಾಯಿಸಿದರು.

ನಗರದಲ್ಲಿ ಬುಧವಾರ  ಏರ್ಪಡಿ­ಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿ, ‘ನಮ್ಮ ಒಕ್ಕೂಟವನ್ನು ಒಡೆ­ಯುವ ಹುನ್ನಾರದಿಂದ ನೃತ್ಯ ನಿರ್ದೇಶಕ ರಾಜೇಶ್‌ ಬ್ರಹ್ಮಾವರ್ ಅವರು ಪರ್ಯಾಯವಾಗಿ ‘ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಒಕ್ಕೂಟ’ವನ್ನು ರಚಿಸಿಕೊಂಡಿದ್ದಾರೆ. ಮಾ.10ರಂದು ನಡೆಯುವ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಆ ಒಕ್ಕೂಟಕ್ಕೆ ಮಾನ್ಯತೆ ನೀಡಿದರೆ ಮಾ.12ರಂದು ಚಿತ್ರೀಕರಣವನ್ನು ಬಹಿಷ್ಕರಿಸಿ ಬಂದ್‌ ನಡೆಸಲಾಗುವುದು ಎಂದು  ಎಚ್ಚರಿಸಿದರು.

ಮಾನ್ಯತೆ ಪಡೆದ ಯಾವ ಸಂಘದಲ್ಲೂ ಸದಸ್ಯತ್ವ ಹೊಂದಿರದ, ವೃತ್ತಿ ಅನುಭವ ಇಲ್ಲದ  ಕೆಲವು ಜನರನ್ನು ಸೇರಿಸಿ ಪರ್ಯಾಯ ಒಕ್ಕೂಟವನ್ನು ರಚಿಸಿಕೊಳ್ಳಲಾಗಿದೆ. ಅದರಲ್ಲಿ 25ಕ್ಕಿಂತ ಹೆಚ್ಚು ಮಂದಿ ಸದಸ್ಯರಿಲ್ಲ. ಪರ್ಯಾಯ ಒಕ್ಕೂಟದಿಂದಾಗಿ ಚಿತ್ರರಂಗದ ಶಾಂತಿ ಕದಡುತ್ತದೆಯೇ ಹೊರತು ಯಾವುದೇ ಪ್ರಯೋಜನವಿಲ್ಲ ಎಂದರು.

‘ನಮ್ಮ ಒಕ್ಕೂಟದಲ್ಲಿ 5 ಸಾವಿರಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರಿದ್ದಾರೆ. 24 ಅಂಗ ಸಂಸ್ಥೆಗಳು ಒಕ್ಕೂಟದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 25 ವರ್ಷಗಳಿಂದ ಒಂದೇ ಕುಟುಂಬದ ರೀತಿಯಲ್ಲಿರುವ ಒಕ್ಕೂಟವನ್ನು ಒಡೆಯುವ ಉದ್ದೇಶದಿಂದ ಈ ಪರ್ಯಾಯ ಒಕ್ಕೂಟ ರಚನೆಯಾಗಿದೆ.  ಮುನಿರತ್ನ, ಬಾ.ಮಾ. ಹರೀಶ್‌ ಸೇರಿದಂತೆ ಕೆಲವು ನಿರ್ಮಾಪಕರು ಸಹ ಇದಕ್ಕೆ ಬೆಂಬಲ  ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಒಕ್ಕೂಟದ ಸದಸ್ಯರಿಗೆ ಇಎಸ್‌ಐ, ಪಿಎಫ್‌ ಸೇರಿದಂತೆ ಮತ್ತಿತರರ ಸೌಲಭ್ಯ­ಗಳನ್ನು ಒದಗಿಸುವಂತೆ ನಿರ್ಮಾಪ­ಕರನ್ನು ಕೇಳಲಾಗುತ್ತಿದೆ ಎಂದರು.

ಕಲಾವಿದರು, ತಂತ್ರಜ್ಞರಿಗೆ ಈ ಸೌಲಭ್ಯ­ಗಳನ್ನು ಒದಗಿಸಿದರೆ ಒಕ್ಕೂಟವು ಇನ್ನಷ್ಟು ಬಲಿಷ್ಠವಾಗಿ ಬೆಳೆಯುತ್ತದೆ. ಅದನ್ನು ತಡೆಯಬೇಕು ಎಂಬ ದುರು­ದ್ದೇಶ ಕೆಲವು ನಿರ್ಮಾಪಕರಲ್ಲಿದೆ ಎಂದು ಹೇಳಿದರು.

ಕೆಲವು ನಿರ್ಮಾಪಕರು ಡಬ್ಬಿಂಗ್‌ ಬೇಕು ಎಂದು ಹೇಳುತ್ತಿದ್ದಾರೆ. ಕನ್ನಡ ಕಲೆ, ಸಂಸ್ಕೃತಿಯನ್ನು ಉಳಿಸಲು ಸರ್ಕಾರವೇ ಡಬ್ಬಿಂಗ್‌ ವಿರುದ್ಧ ಕಾನೂನು ಹೊರಾಟವನ್ನು ಮುಂದು­ವರೆಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.