ADVERTISEMENT

ಪಶ್ಚಿಮಬಂಗಾಳದಲ್ಲೂ ಸಾವಯವ ಕೃಷಿ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:25 IST
Last Updated 10 ಫೆಬ್ರುವರಿ 2012, 19:25 IST

ಯಲಹಂಕ: ಕರ್ನಾಟಕದಲ್ಲಿ ಅನುಷ್ಠಾನಗೊಳಿಸಿರುವ ಸಾವಯವ ಕೃಷಿ ಯೋಜನೆಯನ್ನು ಪಶ್ಚಿಮ ಬಂಗಾಳದಲ್ಲೂ ಅಳವಡಿಸಲು ಚಿಂತನೆ ನಡೆಸಲಾಗುವುದು ಎಂದು ಆ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರದೆಂದು ಸೆನ್ ಹೇಳಿದರು.

ಬೆಂಗಳೂರು ಉತ್ತರ ತಾಲ್ಲೂಕು ಸೀತಕೆಂಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಾವಯವ ಕೃಷಿ ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳನ್ನು ವೀಕ್ಷಿಸಿದ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ಸಾವಯವ ಬೆಳೆಗಳನ್ನು ಬೆಳೆಯುವ ವಿಧಾನ, ಮಾರುಕಟ್ಟೆ, ಬೆಳೆಗಳನ್ನು ಮಾರಾಟ ಮಾಡಲು ಅಳವಡಿಸಿರುವ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದ ಸಾವಯವ ಪ್ರಗತಿಪರ ರೈತರಾದ ಮಂಜುನಾಥ್, ಮಲ್ಲಿಕಾರ್ಜುನ ಮತ್ತು ಕೊಲುವರಾಯನಹಳ್ಳಿಯ ಮುರಳಿ ಅವರ ತೋಟಕ್ಕೆ ಭೇಟಿ ನೀಡಿ, ಸಾವಯವ ಕೃಷಿ ಪದ್ಧತಿ ಅಳವಡಿಸಿ ಬೆಳೆದಿರುವ ರಾಗಿ, ದೊಡ್ಡಮೆಣಸಿನ ಕಾಯಿ, ಹುರುಳಿಗಿಡ, ದ್ರಾಕ್ಷಿ, ಸಪೋಟ, ಅಜೋಲ ಬೆಳೆಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಹೆಚ್ಚುವರಿ ಕೃಷಿ ನಿರ್ದೇಶಕ ಡಾ.ಟಿ.ವಿ.ಗುರುದೇವ್ ಮಾತನಾಡಿ, ಇಡೀ ರಾಷ್ಟ್ರದಲ್ಲೇ ಕರ್ನಾಟಕ ರಾಜ್ಯ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಮೊದಲ ರಾಜ್ಯವಾಗಿದೆ. ಸಾವಯವ ಕೃಷಿಯಲ್ಲಿ ಇದುವರೆಗೂ ರೂಪಿಸಿರುವ ಕಾರ್ಯಕ್ರಮಗಳು ಮತ್ತು ಪ್ರಗತಿಯ ಬಗ್ಗೆ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಜಲ ಸಂಪನ್ಮೂಲ ನೀತಿ ಮತ್ತು ನಿರ್ವಹಣೆ ವಿಭಾಗದ ಸಂಶೋಧನಾ ಸಹಾಯಕರಾದ ದೀಪ್ತಿ ಚತ್ತಿ, ಬೆಂಗಳೂರು ನಗರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ನಂದಿನಿಕುಮಾರಿ, ಸಹಾಯಕ ಕೃಷಿ ನಿರ್ದೇಶಕ ಲಕ್ಷ್ಮಣರೆಡ್ಡಿ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ನಾರಾಯಣ್, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ರವಿ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.