ADVERTISEMENT

ಪಿ.ಯು ಕಾಲೇಜು : ವಿಜ್ಞಾನ, ವಾಣಿಜ್ಯ ವಿಭಾಗದತ್ತ ಹೆಚ್ಚಿದ ಒಲವು

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ಬೆಂಗಳೂರು: `ವಿಜ್ಞಾನ ವಿಭಾಗಕ್ಕೆ ಪ್ರವೇಶ ನೀಡಿದರೆ ಚೆನ್ನಾಗಿತ್ತು. ವಾಣಿಜ್ಯ ವಿಭಾಗವಾದರೂ ಪರವಾಗಿಲ್ಲ. ಶುಲ್ಕ ಜಾಸ್ತಿಯಾದರೂ ಪಾವತಿಸುತ್ತೇವೆ. ವಿಜ್ಞಾನ ಅಥವಾ ವಾಣಿಜ್ಯ ವಿಭಾಗದಲ್ಲಿ ಸೀಟು ಕೊಡಿ ಸರ್~...
ನಗರದ ಪ್ರತಿಷ್ಠಿತ ಪದವಿಪೂರ್ವ ಕಾಲೇಜಿನಲ್ಲಿ ಮಗಳನ್ನು ವಿಜ್ಞಾನ ಅಥವಾ ವಾಣಿಜ್ಯ ವಿಭಾಗಕ್ಕೆ ಸೇರಿಸಬೇಕು ಎಂದು ಕನಸು ಹೊತ್ತ ತಾಯಿಯೊಬ್ಬರು ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖರಲ್ಲಿ ವಿನಂತಿಸಿದ ಬಗೆಯಿದು.

ಸುಮಾರು ಕಾಲು ಗಂಟೆಗಳ ಕಾಲ ಚೌಕಾಸಿ ನಡೆಸಿದ ಆ ಮಹಿಳೆ, ಮಗಳಿಗೆ ಸೀಟು ದೊರಕುವ ವಿಶ್ವಾಸ ದೊರಕಿದ ಮೇಲೆಯೇ ವಾಪಸಾದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಬಳಿಕ ನಗರದ ಪದವಿಪೂರ್ವ ಕಾಲೇಜುಗಳ ಪಡಸಾಲೆಯಲ್ಲಿ ಕಾಣ ಸಿಗುತ್ತಿರುವ ದೃಶ್ಯವಿದು.

ವಿಜ್ಞಾನ ವಿಭಾಗದ ಜೊತೆಗೆ ವಾಣಿಜ್ಯ ವಿಭಾಗಕ್ಕೆ ಸೇರ್ಪಡೆಗೆ ವಿದ್ಯಾರ್ಥಿಗಳ ಒಲವು ಹೆಚ್ಚಿರುವುದು ಈ ಬಾರಿಯ ವಿಶೇಷ. ನಾಲ್ಕೈದು ವರ್ಷಗಳಿಂದ ವಾಣಿಜ್ಯ ವಿಭಾಗದ ಕಡೆಗೆ ವಿದ್ಯಾರ್ಥಿಗಳ ವ್ಯಾಮೋಹ ಹೆಚ್ಚಲಾರಂಭಿಸಿತ್ತು. ಈ ಸಲ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಬಿ.ಇ ಅಥವಾ ಎಂಬಿಬಿಎಸ್ ಕಲಿತರೆ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ಒಳ್ಳೆಯ ಉದ್ಯೋಗ ಸಿಗುತ್ತದೆ.
 
ವಾಣಿಜ್ಯ ವಿಭಾಗಕ್ಕೆ ಸೇರ್ಪಡೆಯಾದರೆ ಸುಲಭದಲ್ಲಿ ಉದ್ಯೋಗ ದೊರಕುತ್ತದೆ ಎಂಬ ಭಾವನೆ ಮೂಡಿರುವುದೇ ಇದಕ್ಕೆ ಕಾರಣ ಎಂಬುದು ಕಾಲೇಜು ಆಡಳಿತ ಮಂಡಳಿಗಳ ಅಭಿಪ್ರಾಯ.`ಈ ವರ್ಷ ಆನ್‌ಲೈನ್ ಅರ್ಜಿ ಸ್ವೀಕಾರ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಕಾಲೇಜುಗಳಿಗೆ ಬರುವ ಅರ್ಜಿ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷ ನಮ್ಮ ಕಾಲೇಜಿನಲ್ಲಿ 12 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ವಿದ್ಯಾರ್ಥಿಗಳು ಪಡೆದಿದ್ದರು. 

ಈ ವರ್ಷ ಈ ವರೆಗೆ 3,500 ಅರ್ಜಿಗಳು ಮಾತ್ರ ಹೋಗಿವೆ. ವಿದ್ಯಾರ್ಥಿಗಳ ಆಸಕ್ತಿ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ವಾಣಿಜ್ಯ ವಿಭಾಗಕ್ಕೆ ಮೊದಲ ಆದ್ಯತೆ ನೀಡುವವರ ಸಂಖ್ಯೆ ಜಾಸ್ತಿ ಆಗಿದೆ. ಶೇ 80ಕ್ಕಿಂತ ಜಾಸ್ತಿ ಅಂಕ ಗಳಿಸಿದ ವಿದ್ಯಾರ್ಥಿಗಳು ಸಹ ವಾಣಿಜ್ಯ ವಿಭಾಗಕ್ಕೆ ಸೇರಲು ಆಸಕ್ತಿ ತೋರುತ್ತಿದ್ದಾರೆ~ ಎಂದು ಶೇಷಾದ್ರಿಪುರ ಶಿಕ್ಷಣ ಪ್ರತಿಷ್ಠಾನದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೆ ಪಿ.ಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.

`ವಾಣಿಜ್ಯ ವಿಭಾಗದ ಸೇರ್ಪಡೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಜಾಸ್ತಿ ಆಗಿದೆ. ವಿಜ್ಞಾನ ವಿಭಾಗದಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್‌ಗೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಮೊದಲ ಪಟ್ಟಿಯಲ್ಲಿ ವಿಜ್ಞಾನ ವಿಭಾಗಕ್ಕೆ ಶೇ 80ಕ್ಕಿಂತ ಅಧಿಕ ಅಂಕ, ವಾಣಿಜ್ಯಕ್ಕೆ ಶೇ 60ಕ್ಕಿಂತ ಜಾಸ್ತಿ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಕಲಾ ವಿಭಾಗಕ್ಕೆ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದರೆ ಸಾಕು~ ಎಂದು ಬಸವನಗುಡಿ ನ್ಯಾಷನಲ್ ಕಾಲೇಜಿನ ಸಿಬ್ಬಂದಿಯೊಬ್ಬರು ತಿಳಿಸಿದರು.

`ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದವರ ಪ್ರಮಾಣ ಹೆಚ್ಚಿದ್ದರಿಂದ ಈ ಬಾರಿ ಪಿಯುಸಿಗೆ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಶೇ 50ರಷ್ಟು ಹೆಚ್ಚಿದೆ. ಈ ಸಲ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಕ್ಕೆ ಸಮಾನ ಬೇಡಿಕೆ ಇದೆ. ಕಳೆದ ವರ್ಷ ವಿಜ್ಞಾನ ವಿಭಾಗದಲ್ಲಿ ಶೇ 94, ವಾಣಿಜ್ಯ ವಿಭಾಗದಲ್ಲಿ ಶೇ 85 ಹಾಗೂ ಕಲಾ ವಿಭಾಗದಲ್ಲಿ ಶೇ 65ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಪಿಯುಸಿಯಲ್ಲಿ ಈ ಬಾರಿ ಕಾಲೇಜಿಗೆ 16 ರ‌್ಯಾಂಕ್ ಬಂದಿದೆ. ಅರ್ಜಿ ಸಲ್ಲಿಕೆ ಪ್ರಮಾಣವೂ ಹೆಚ್ಚಿದೆ~ ಎಂಬುದು ಜೈನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಆರ್. ಚೆನ್‌ರಾಜ್ ಜೈನ್ ಅವರ ಅಭಿಮತ.

`ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಹಾಗೂ ವಾಣಿಜ್ಯ ವಿಭಾಗಕ್ಕೆ ಈ ಬಾರಿ ಹೆಚ್ಚಿನ ಬೇಡಿಕೆ ಇದೆ. ನಾಲ್ಕೈದು ವರ್ಷಗಳಿಂದ ವಾಣಿಜ್ಯ ವಿಭಾಗದ ಕಡೆಗೆ ವಿದ್ಯಾರ್ಥಿಗಳ ಒಲವು ಗಣನೀಯವಾಗಿ ಹೆಚ್ಚುತ್ತಿದೆ. ವಾಣಿಜ್ಯ ಪದವಿ ಗಳಿಸಿದರೆ ಉದ್ಯೋಗಾವಕಾಶ ಜಾಸ್ತಿ ಎಂಬ ಭಾವನೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಮೂಡಿರುವುದೇ ಇದಕ್ಕೆ ಕಾರಣ~  ಎಂದು ನಗರದ ಆರ್‌ಬಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಶ್ರೀಕಂಠ ಅಭಿಪ್ರಾಯಪಟ್ಟರು.

`ಗ್ರಾಮೀಣ ಭಾಗದಲ್ಲಿ ಚಿತ್ರಣ ವಿಭಿನ್ನ. ಅಲ್ಲಿನ ವಿದ್ಯಾರ್ಥಿಗಳ ಮೊದಲ ಆದ್ಯತೆ ವಿಜ್ಞಾನ. ಎರಡನೇ ಸ್ಥಾನ ಕಲಾವಿಭಾಗಕ್ಕೆ. ಕೊನೆಯ ಆದ್ಯತೆ ವಾಣಿಜ್ಯ ವಿಭಾಗಕ್ಕೆ. ಎಲ್ಲ ಕಡೆಯಲ್ಲೂ ಏಕರೂಪದ ಪ್ರವೃತ್ತಿ ಕಂಡು ಬರುವುದಿಲ್ಲ~ ಎಂದು ಅವರು ತಿಳಿಸಿದರು.

ಮಕ್ಕಳ ಸೇರ್ಪಡೆಗೆ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಕಡೆಗೆ ಪೋಷಕರ ಮೊದಲ ಚಿತ್ತ. ಕಾಲೇಜುಗಳ ಶೈಕ್ಷಣಿಕ ಹಿನ್ನೆಲೆ ಹಾಗೂ ಕೋರ್ಸ್‌ಗಳ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಿ, ಪರಿಚಿತರಲ್ಲಿ ವಿಚಾರಿಸಿ ಮಕ್ಕಳ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಆದ್ಯತೆ ನೀಡುತ್ತಿರುವವರು ಸಾಕಷ್ಟು ಮಂದಿ. `ಈ ಕಾಲೇಜು ಹೇಗಿದೆ, ಇಲ್ಲಿ ಟ್ಯೂಷನ್ ನೀಡುವುದಿಲ್ಲವಂತೆ, ಉಪನ್ಯಾಸಕರು ಹೇಗಿದ್ದಾರೆ~ ಎಂದು ವಿಚಾರಿಸುವವರೂ ಕಡಿಮೆ ಇಲ್ಲ. ಕಾಲೇಜು ಕ್ಯಾಂಪಸ್‌ಗಳಲ್ಲಿ ಈಗ ಅರ್ಜಿ ಸಲ್ಲಿಸುವವರದ್ದೇ ಕಲರವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.