ಬೆಂಗಳೂರು: ಮಹದೇವಪುರ ವರ್ತುಲ ರಸ್ತೆಯಲ್ಲಿ ಭಾನುವಾರ ರಾತ್ರಿ ದರೋಡೆಕೋರರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ನೈಜೀರಿಯಾ ಮೂಲದ ಯುವಕರು ಪಾನಮತ್ತರಾಗಿ ಕಾನ್‌ಸ್ಟೆಬಲ್‌ಗೆ ಥಳಿಸಿದ್ದಾರೆ.
ಮಹದೇವಪುರದ ಲೌರಿ ಸ್ಕೂಲ್ ಸಮೀಪ ರಾತ್ರಿ ಆರು ಮಂದಿ ದರೋಡೆಕೋರರು ಕ್ಯಾಂಟರ್ ವಾಹನವನ್ನು ಅಡ್ಡಗಟ್ಟಿ ಚಾಲಕ ಸತ್ಯನಾರಾಯಣ ಅವರ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದರು. ಈ ವೇಳೆ ಅದೇ ಮಾರ್ಗವಾಗಿ ಸಾಗಿ ಬಂದ ಇತರೆ ವಾಹನಗಳ ಚಾಲಕರು, ಆ ಘಟನೆಯ ಬಗ್ಗೆ ಸಮೀಪದಲ್ಲೇ ಚೀತಾ ವಾಹನದಲ್ಲಿ ಗಸ್ತು ತಿರುಗುತ್ತಿದ್ದ ಮಹದೇವಪುರ ಠಾಣೆ ಹೆಡ್ ಕಾನ್‌ಸ್ಟೆಬಲ್ ಕುಮಾರ್ ಮತ್ತು ಕಾನ್‌ಸ್ಟೆಬಲ್ ಪ್ರಭಾಕರ್ ಅವರಿಗೆ ಮಾಹಿತಿ ನೀಡಿದ್ದಾರೆ.
ಈ ವಿಷಯ ತಿಳಿದು ಕೂಡಲೇ ಘಟನಾ ಸ್ಥಳಕ್ಕೆ ಹೋದ ಕುಮಾರ್ ಮತ್ತು ಪ್ರಭಾಕರ್ ದರೋಡೆಕೋರರನ್ನು ಹಿಡಿಯಲು ಮುಂದಾಗಿದ್ದಾರೆ. ಆಗ ದರೋಡೆಕೋರರು, ಅವರಿಬ್ಬರ ಮೇಲೂ ಮಚ್ಚು ಲಾಂಗ್‌ಗಳಿಂದ ಹಲ್ಲೆ ನಡೆಸಿ ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಸಿಬ್ಬಂದಿ ಘಟನೆಯ ಬಗ್ಗೆ ಠಾಣೆಗೆ ಮಾಹಿತಿ ಕೊಟ್ಟಿದ್ದಾರೆ.
ಆ ನಂತರ ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಂಟರ್ ಚಾಲಕ ಸತ್ಯನಾರಾಯಣ ಅವರಿಂದ ಮೂರು ಸಾವಿರ ನಗದು ಮತ್ತು ಮೊಬೈಲ್ ದೋಚಿರುವ ದರೋಡೆಕೋರರು ಕೃತ್ಯಕ್ಕೆ ಬಳಸಿದ್ದ ಬೈಕ್ (ಕೆಎ-51, ವಿ-1501) ಒಂದನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಈ ಮಾಹಿತಿ ಆಧರಿಸಿ ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಘಟನೆಯಲ್ಲಿ ಕುಮಾರ್ ಅವರ ಎಡಗೈಗೆ ಮತ್ತು ಪ್ರಭಾಕರ್ ಅವರ ಮುಖಕ್ಕೆ ಪೆಟ್ಟಾಗಿದೆ. ಈ ಸಂಬಂಧ ದರೋಡೆ, ಕೊಲೆ ಯತ್ನ ಹಾಗೂ ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಮಹದೇವಪುರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮತ್ತೊಂದು ಪ್ರಕರಣ: ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ನೈಜೀರಿಯಾ ಮೂಲದ ನಾಲ್ಕು ಮಂದಿ ಯುವಕರು ಬಾಣಸವಾಡಿ ಠಾಣೆ ಕಾನ್‌ಸ್ಟೆಬಲ್ ರಘು ಎಂಬುವರ ಮೇಲೆ ಬೆಲ್ಟ್ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಕಮ್ಮನಹಳ್ಳಿಯ ಬಾರ್ ಒಂದರಲ್ಲಿ ರಾತ್ರಿ ಮದ್ಯಪಾನ ಮಾಡಿ ಹೊರಬಂದ ಆ ನಾಲ್ಕು ಮಂದಿ ರಸ್ತೆ ಬದಿಯಲ್ಲಿ ಜಗಳವಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಬಾಣಸವಾಡಿ ಠಾಣೆಗೆ ದೂರು ನೀಡಿದರು. ಈ ದೂರು ಆಧರಿಸಿ ಚೀತಾ ವಾಹನದಲ್ಲಿ ಸ್ಥಳಕ್ಕೆ ಹೋದ ಕಾನ್‌ಸ್ಟೆಬಲ್‌ಗಳಾದ ರಘು ಮತ್ತು ದುಂಡಯ್ಯ ಹಿರೇಮಠ್, ಜಗಳ ಬಿಡಿಸಲು ಯತ್ನಿಸಿದ್ದಾರೆ. ಆಗ ಆ ಯುವಕರು ರಘು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಘು ಅವರ ತಲೆಗೆ ಪೆಟ್ಟಾಗಿದ್ದು, ವೈದ್ಯರು ಐದು ಹೊಲಿಗೆ ಹಾಕಿದ್ದಾರೆ. ಘಟನೆ ಸಂಬಂಧ ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಇಮ್ಯಾನ್ಯುಯಲ್ (26) ಎಂಬಾತನನ್ನು ಬಂಧಿಸಲಾಗಿದೆ.
ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಇಮ್ಯಾನ್ಯುಯಲ್‌ನ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಆತ ವಿಚಾರಣೆಗೆ ಸಹಕರಿಸುತ್ತಿಲ್ಲ ಮತ್ತು ಇತರೆ ಆರೋಪಿಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.