ಬೆಂಗಳೂರು: ನಗರದಲ್ಲಿ ಭಾನುವಾರ ನಡೆದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಐದು ವರ್ಷದೊಳಗಿನ 5,30,232 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಶೇ 81.49ರಷ್ಟು ಪ್ರಗತಿ ಸಾಧಿಸಲಾಗಿದೆ.
`ಒಟ್ಟು 6,50,592 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿತ್ತು. ಪೋಲಿಯೊ ಲಸಿಕೆ ಹಾಕಲು 1800 ಬೂತ್‌ಗಳನ್ನು ತೆರೆಯಲಾಗಿತ್ತು. ಇದಲ್ಲದೆ, ರೈಲು ನಿಲ್ದಾಣ, ಉದ್ಯಾನ, ಮಾಲ್ ಮತ್ತಿತರ ಕಡೆಗಳಲ್ಲಿ 576 ಸಂಚಾರಿ ಬೂತ್‌ಗಳನ್ನು ತೆರೆದು ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಯಿತು. ಈ ಕಾರ್ಯಕ್ಕಾಗಿ 417 ಮೇಲ್ವಿಚಾರಕರು ಹಾಗೂ 8,352 ಸಿಬ್ಬಂದಿಯ ಬಳಸಿಕೊಳ್ಳಲಾಗಿತ್ತು~ ಎಂದು ಪಾಲಿಕೆಯ ಉಪ ಆರೋಗ್ಯಾಧಿಕಾರಿ ಜಿ.ಕೆ. ಸುರೇಶ್ `ಪ್ರಜಾವಾಣಿ~ಗೆ ತಿಳಿಸಿದರು.
ರೋಟರಿ ನೆರವು: ದೇಶಾದ್ಯಂತ ನಡೆದ ಪಲ್ಸ್ ಪೋಲಿಯೊ ಅಭಿಯಾನದಲ್ಲಿ ಲಕ್ಷಾಂತರ ಮಕ್ಕಳಿಗೆ ಲಸಿಕೆ ಹಾಕಲು ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆಯ ಸದಸ್ಯರು ನೆರವಾದರು. ರೋಟರಿ ಸದಸ್ಯರು 7,09,000 ಬೂತ್‌ಗಳಿಗೆ ಸುಮಾರು 170 ಮಿಲಿಯ ಲಸಿಕೆಗಳನ್ನು ತಲುಪಿಸಿದರು. ಐದು ವರ್ಷಕ್ಕಿಂತ ಕೆಳಗಿನ ಸಾವಿರಾರು ಮಕ್ಕಳಿಗೆ ಲಸಿಕೆ ನೀಡಲಾಯಿತು. ರೋಗ ನಿರೋಧಕ ಚಟುವಟಿಕೆ ಕುರಿತಂತೆ ಐದು ದಿನಗಳ ಮುಂಚಿತವಾಗಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.