ಬೆಂಗಳೂರು: ತಮ್ಮ ಆಸೆ ಆಕಾಂಕ್ಷೆಗಳಿಗೆ ಮಕ್ಕಳನ್ನು ಬಲಿ ಕೊಡುವುದನ್ನು ಪೋಷಕರು ನಿಲ್ಲಿಸಬೇಕು. ಅವರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ, ಅದೇ ಕ್ಷೇತ್ರ ಆಯ್ಕೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ನಿಮ್ಹೋನ್ಸ್‌ನ ಪ್ರಾಧ್ಯಾಪಕಿ ಡಾ.ಪ್ರಕಾಶಿ ರಾಜಾರಾಮ್ ಇಲ್ಲಿ ಹೇಳಿದರು.
ಮಹಿಳಾ ದಿನದ ನಿಮಿತ್ತ ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹಿಳೆಯರ ಜವಾಬ್ದಾರಿ ದೊಡ್ಡದು. ತಮ್ಮ ಮಕ್ಕಳು ಎಂಜಿನಿಯರ್ ಆಗಬೇಕು, ಡಾಕ್ಟರ್ ವೃತ್ತಿ ನಡೆಸಬೇಕು, ವಿದೇಶಕ್ಕೆ ಹೋಗಬೇಕು ಎಂಬುದನ್ನೇ ಮನಸ್ಸಿನಲ್ಲಿ ತುಂಬಿಸಿಕೊಳ್ಳಬೇಡಿ. ಡಾಕ್ಟರ್, ಎಂಜಿನಿಯರ್ ಅಷ್ಟೇ ಈ ದೇಶದ ಪ್ರಜೆಗಳಲ್ಲ. ಮಕ್ಕಳನ್ನು ಮೊದಲು ಉತ್ತಮ ಪ್ರಜೆಯಾಗಿ ಮುಂದೆ ಬರುವುದಕ್ಕೆ ಉತ್ತೇಜನ ನೀಡಿ~ ಎಂದು ಅವರು ಹೇಳಿದರು.
`ನಿಮ್ಮ ಮಕ್ಕಳು ಕೆಟ್ಟ ವ್ಯಕ್ತಿಯಾಗಿ ಬೆಳೆದರೆ ಅದಕ್ಕೆ ಸಮಾಜ ಕಾರಣವಲ್ಲ. ನಿಮ್ಮ ಮನೆಯ ವಾತಾವರಣವೇ ಮೂಲ ಕಾರಣ ಎಂದು ತಿಳಿದುಕೊಳ್ಳಿ. ಅಕ್ಕ-ಪಕ್ಕದ ಮನೆಯ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡುವುದನ್ನು ನಿಲ್ಲಿಸಿ. ಇದನ್ನು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಕಲಿತುಕೊಳ್ಳಬೇಕಿದೆ~ ಎಂದು ಪ್ರಕಾಶಿ ಕಿವಿಮಾತು ಹೇಳಿದರು.
~ಹಿಂದಿನ ದಿನಗಳಿಗೆ ಹೋಲಿಸಿದರೆ ಶಾಲೆ-ಕಾಲೇಜುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ವೈಯಕ್ತಿಕ ಜವಾಬ್ದಾರಿ ಕಡಿಮೆ ಆಗಿದೆ. ಆದುದರಿಂದ ಕನಿಷ್ಠ 18 ವರ್ಷಗಳವರೆಗೆ ನಿಮ್ಮ ಮಕ್ಕಳ ಮೇಲೆ ನಿಗಾ ಇರಲಿ.
ಕಟ್ಟುಪಾಡುಗಳಿಗೆ ಅವರಿಗೆ ಒಳಪಡಿಸುವ ಬದಲು ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅವರಿಗೆ ಕಲಿಸುವ ಜವಾಬ್ದಾರಿಯನ್ನು ಮಹಿಳೆಯರೇ ವಹಿಸಬೇಕಾಗಿದೆ~ ಎಂದು ಅವರು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ ಮಾತನಾಡಿ, ಮಹಿಳೆ ತನ್ನ ಸಂತಸಕ್ಕಾಗಿ ಒಂದಿಷ್ಟು ಸಮಯ ಮೀಸಲು ಇರಿಸಲು ಮುಂದಾದರೆ ಹಲ ಮನೆಗಳಲ್ಲಿ ನೂರಾರು ಮಾತು ಬರುವುದು ಉಂಟು. ಆದರೆ ಇದನ್ನೇ ಮನಸ್ಸಿಗೆ ಹಾಕಿಕೊಂಡು ಮೂಲೆಯಲ್ಲಿ ಕುಳಿತುಕೊಳ್ಳುವಲ್ಲಿ ಅರ್ಥವಿಲ್ಲ. ವರ್ಷಕ್ಕೆ ಒಮ್ಮೆ ಬರುವ ಮಹಿಳಾ ದಿನದಂದಾರೂ ಕೊನೆಯ ಪಕ್ಷ ಆಕೆ ತನ್ನಲ್ಲಿ ಇರುವ ಪ್ರತಿಭೆಯನ್ನು ಬೆಳಕಿಗೆ ತರಬೇಕು. ಮಕ್ಕಳ, ಪತಿಯ, ಮನೆಯ ನಿರ್ವಹಣೆ ಜೊತೆ ಪ್ರತಿಭೆಯಲ್ಲಿಯೂ ತಾನು ಮುಂದೆ ಎನ್ನುವುದನ್ನು ಆಕೆ ಸಾಬೀತು ಪಡಿಸಬೇಕು~ ಎಂದರು.
ಕಾರ್ಯಕ್ರಮದ ನಂತರ ಫ್ಯಾಷನ್ ಷೋ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.