ADVERTISEMENT

ಪೌರಕಾರ್ಮಿಕರಿಂದ ಪ್ರತಿಭಟನೆ

ವೇತನ ಪಾವತಿಗೆ ಆಗ್ರಹ– ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ತೀವ್ರ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:52 IST
Last Updated 25 ಮೇ 2018, 19:52 IST
ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಪೌರಕಾರ್ಮಿಕರು ಶುಕ್ರವಾರ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಪೌರಕಾರ್ಮಿಕರು ಶುಕ್ರವಾರ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು   

ಬೆಂಗಳೂರು: ನಗರದ ಪೌರ ಕಾರ್ಮಿಕರಿಗೆ ಆರು ತಿಂಗಳಿನಿಂದ ವೇತನ ಪಾವತಿಸಿಲ್ಲ. ಅದನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪೌರ ಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ನಗರದ ಪ್ರತಿ ವಾರ್ಡ್‌ಗಳಿಂದ ತಲಾ ಐವರು ಕಾರ್ಮಿಕರಂತೆ ನೂರಾರು ಮಂದಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂದೆ ಸೇರಿ ಪ್ರತಿಭಟನೆ ನಡೆಸಿದರು.

‘ಬಿಬಿಎಂಪಿ ಪೌರಕಾರ್ಮಿಕರಿಗೆ ಪ್ರಸಕ್ತ ಜನವರಿಯಿಂದ ನೇರವಾಗಿ ವೇತನ ಪಾವತಿಸುವುದಾಗಿ ಸರ್ಕಾರ ಹೇಳಿತ್ತು. ಅಂದಿನಿಂದ ಹೊರಗುತ್ತಿಗೆ ಪದ್ಧತಿ ರದ್ದಾಗಿತ್ತು. ನೇರ ವೇತನ ಪಾವತಿಸುವ ವ್ಯವಸ್ಥೆ ಬಂದ ಬಳಿಕ ಇದುವರೆಗೆ ಕಾರ್ಮಿಕರಿಗೆ ವೇತನ ಪಾವತಿ ಆಗಿಲ್ಲ’ ಎಂದು ಸಂಘದ ನಗರ ಘಟಕದ ಅಧ್ಯಕ್ಷ ಮುತ್ಯಾಳಪ್ಪ ಹೇಳಿದರು.

ADVERTISEMENT

‘ನಗರದಲ್ಲಿ 16 ಸಾವಿರ ಪೌರ ಕಾರ್ಮಿಕರು ಇದ್ದಾರೆ. ಪ್ರತಿ ಕಾರ್ಮಿಕನಿಗೆ ಮಾಸಿಕ ₹ 17 ಸಾವಿರ ವೇತನ ಕೊಡುವುದಾಗಿ ಸರ್ಕಾರ ಹೇಳಿತ್ತು. ಇದುವರೆಗೆ ಹಣ ಪಾವತಿ ಆಗಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಈಗ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ಪಾಲಿಕೆ ಅಧಿಕಾರಿಗಳು ಸ್ಪಂದಿಸದಿದ್ದರೆ ಶನಿವಾರದಿಂದ ಎಲ್ಲ ಕಾರ್ಮಿಕರೂ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಅವರು ಎಚ್ಚರಿಸಿದರು.

ಬಳಿಕ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆಂಜನೇಯಲು, ಸಂಘಟನಾ ಕಾರ್ಯದರ್ಶಿ ಓಬಳಾಪತಿ, ಬೆಂಗಳೂರು ಘಟಕದ ಉಪಾಧ್ಯಕ್ಷ ಎಂ.ಜಿ.ಶ್ರೀನಿವಾಸ್‌, ಜಗದೀಶ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.