ಆದಾಯ ತೆರಿಗೆ ಮಿತಿಗಿಂತ ಕಡಿಮೆ ವರಮಾನ ಇರುವ ಸಣ್ಣ ಉದ್ದಿಮೆದಾರರು `ಕಾಯಂ ಖಾತೆ ಸಂಖ್ಯೆ~ (ಪ್ಯಾನ್) ಹೊಂದಿರುವುದು ಕಡ್ಡಾಯ ಎಂಬ ಆದಾಯ ತೆರಿಗೆ ಕಾಯ್ದೆಯ ಸಂಬಂಧಿತ ಕಲಮನ್ನು ಅನೂರ್ಜಿತಗೊಳಿಸಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
1961ರ ಈ ಕಾಯ್ದೆಯ 206 ಎಎ ಕಲಮನ್ನು ರದ್ದು ಮಾಡಿರುವ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು, `ಪ್ಯಾನ್~ ನೀಡುವಂತೆ ಬ್ಯಾಂಕ್‌ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಇಂತಹ ಉದ್ದಿಮೆದಾರರಿಗೆ ಒತ್ತಾಯ ಮಾಡಬಾರದು ಎಂದು ಹೇಳಿದ್ದಾರೆ.
2010ರ ಏಪ್ರಿಲ್ 1ರಿಂದ ಅನ್ವಯ ಆಗುವಂತೆ ಜಾರಿಗೆ ಬಂದ 206 ಎಎ ಕಲಮಿನ ರದ್ದತಿಗೆ ಕೋರಿ ಕೌಶಲ್ಯ ಬಾಯಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. `ಇಂತಹ ಉದ್ದಿಮೆದಾರರು ಕೂಡ `ಪ್ಯಾನ್~ ಹೊಂದುವುದು ಕಡ್ಡಾಯ. ಅದನ್ನು ಹೊಂದದೇ ಇದ್ದರೆ ಅವರು ಬ್ಯಾಂಕ್‌ಗಳಲ್ಲಿ ಇಡುವ ಠೇವಣಿ ಹಣಕ್ಕೆ ಅನುಗುಣವಾಗಿ ಆದಾಯ ತೆರಿಗೆ ಕಡಿತಗೊಳಿಸಲಾಗುವುದು~ ಎಂದು ಈ ಕಲಮಿನಲ್ಲಿ ತಿಳಿಸಲಾಗಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ತಾವು ಉಳಿತಾಯ ಮಾಡಿದ್ದ ಹಣವನ್ನು ಹೆಚ್ಚು ಬಡ್ಡಿಯ ಆಸೆಯಿಂದ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಠೇವಣಿಯಾಗಿ ಇಡಲು ಅರ್ಜಿದಾರರು ಮುಂದಾಗಿದ್ದರು. ಆದರೆ ಆಗ ಸಂಸ್ಥೆಗಳು `ಪ್ಯಾನ್~ ಕಾರ್ಡ್ ಕೇಳಿದವು. ಇದು ಸರಿಯಲ್ಲ ಎನ್ನುವುದು ಅವರ ವಾದ.
ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ. `ಕಡಿಮೆ ಆದಾಯವುಳ್ಳ ವ್ಯಕ್ತಿಗಳಿಗೆ ಈ ರೀತಿ ಕಡ್ಡಾಯ ಹೇರಿದರೆ ಅವರು ಹಣ ಉಳಿತಾಯ ಮಾಡದೆ ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಇದೆ. ಹೆಚ್ಚು ಜನರನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರಬೇಕು ಎಂಬ ಉದ್ದೇಶದಿಂದ ಈ ನಿಯಮ ಜಾರಿಗೊಳಿಸಿರುವುದು ಸತ್ಯ. ಆದರೆ ಸಣ್ಣ ಉದ್ದಿಮೆದಾರರನ್ನೂ ತೆರಿಗೆ ವ್ಯಾಪ್ತಿಗೆ ಒಳಪಡಿಸಿರುವುದು ಸರಿಯಲ್ಲ~ ಎಂದು ಆದೇಶದಲ್ಲಿ ಅವರು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.