ADVERTISEMENT

ಪ್ರತಿಪಕ್ಷಗಳನ್ನು ದೂರ ಇಟ್ಟು ಜಯಂತಿ ಆಚರಣೆ: ದೇವೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 20:21 IST
Last Updated 5 ಅಕ್ಟೋಬರ್ 2017, 20:21 IST
ಪ್ರತಿಪಕ್ಷಗಳನ್ನು ದೂರ ಇಟ್ಟು ಜಯಂತಿ ಆಚರಣೆ: ದೇವೇಗೌಡ ಆರೋಪ
ಪ್ರತಿಪಕ್ಷಗಳನ್ನು ದೂರ ಇಟ್ಟು ಜಯಂತಿ ಆಚರಣೆ: ದೇವೇಗೌಡ ಆರೋಪ   

ಬೆಂಗಳೂರು: ವಾಲ್ಮೀಕಿ ಜಯಂತಿ ಆಚರಣೆ ವೇಳೆ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಪ್ರತಿಪಕ್ಷದವರನ್ನು ದೂರ ಇಟ್ಟಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ದೂರಿದರು.

ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಶಾಸಕರ ಭವನದಲ್ಲಿ ಜಾಗ ನೀಡುವ ಔದಾರ್ಯ ತೋರಿರುವುದು ಶ್ಲಾಘನೀಯ. ಆದರೆ, ಸರ್ಕಾರದಿಂದ ಆಚರಿಸುವ ಕಾರ್ಯಕ್ರಮಕ್ಕೆ ಪ್ರತಿಪಕ್ಷದವರಿಗೆ ಆಹ್ವಾನ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

ಜೆಡಿಎಸ್ ಕಚೇರಿ ಜೆಪಿ‌ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ನಾನು ಮತ್ತು ಕುಮಾರಸ್ವಾಮಿ ಸಾಕಷ್ಟು ಕೆಲಸ ಮಾಡಿದ್ದೇವೆ. ಕುಮಾರಸ್ವಾಮಿ ರಾಜಕೀಯಕ್ಕೆ ಬರುವ ಮುನ್ನ ಚಿತ್ರರಂಗದಲ್ಲಿ ಇದ್ದಾಗಲೇ ಈ ಸಮುದಾಯದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು’ ಎಂದು ನೆನಪಿಸಿಕೊಂಡರು.

ಶಾಸಕ ಜಮೀರ್ ಅಹ್ಮದ್‌ ಖಾನ್ ರಾಜ್ಯದ ಸಮರ್ಥ ಮುಸ್ಲಿಂ ನಾಯಕ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಹೇಳಿಕೆ ನೀಡಿರುವುದು ದುರಂತ. ಅವರ ಹೇಳಿಕೆಗಳನ್ನು ಹಿಂದಿನಿಂದಲೂ ನೋಡುತ್ತಿದ್ದೇನೆ. ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಹೇಳಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತವನ್ನು ನೋಡಿದ್ದೇನೆ. ನಾನೇ ಸ್ವತಃ ಆಡಳಿತವನ್ನೂ ನಡೆಸಿದ್ದೇನೆ. ಲೋಕಾಯುಕ್ತ ಸ್ಥಾಪನೆ ಆಗಿದ್ದು ನಮ್ಮ ಅವಧಿಯಲ್ಲೇ.‌ ಈಗ ಅದರ ಸ್ಥಿತಿ ಏನಾಗಿದೆ ಎಂಬುದು ಗೊತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಮುಚ್ಚಿ ಭ್ರಷ್ಟಾಚಾರ ಸ್ಥಾಪನೆ ಮಾಡಿದ್ದಾರೆ. ಇದು ಏನು ಕೆಲಸ ಮಾಡುತ್ತಿದೆ ಎಂಬುದೂ ಗೊತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಚರ್ಚೆಯಾಗಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.