ADVERTISEMENT

ಪ್ರತಿಭಟನೆ ಕೈಬಿಡದಿರಲು ಕುಸ್ಮಾ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 18:55 IST
Last Updated 12 ಜುಲೈ 2012, 18:55 IST

ಬೆಂಗಳೂರು: ಕಡ್ಡಾಯ ಶಿಕ್ಷಕ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನದ ವೇಳೆ ಅಲ್ಪಸಂಖ್ಯಾತ ಶಾಲೆಗಳನ್ನು ಗುರುತಿಸುವಲ್ಲಿ ರಾಜ್ಯ ಸರ್ಕಾರದ ವಿಫಲವಾಗಿದೆ ಎಂದು ಆರೋಪಿಸಿ ಇದೇ 16ರಿಂದ 22ರ ವರೆಗೆ ನಡೆಸಲು ಉದ್ದೇಶಿಸಿರುವ ಶಾಲಾ ಬಂದ್ ಕೈ ಬಿಡದಿರಲು ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ನಿರ್ಧರಿಸಿದೆ.

ರಾಜಕೀಯ ಅಸ್ಥಿರತೆ ಹಾಗೂ ಖಾಸಗಿ ಶಾಲೆಗಳ ಕೆಲವು ಆಡಳಿತ ಮಂಡಳಿಗಳು ಬಂದ್‌ಗೆ ಬೆಂಬಲ ನೀಡದಿರಲು ನಿರ್ಧರಿಸಿದ್ದರಿಂದ ಬಂದ್ ಬಗ್ಗೆ ಸಂಘದಲ್ಲೇ ಗೊಂದಲ ಮೂಡಿತ್ತು. ಗುರುವಾರ ನಡೆದ ಸಂಘದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ಬಂದ್ ನಡೆಸುವ ನಿರ್ಧಾರಕ್ಕೆ ಬರಲಾಯಿತು.

`ಪ್ರತಿಭಟನೆ ನಡೆಸುವುದು ಸುಪ್ರೀಂ ಕೋರ್ಟ್ ಆದೇಶದ ನಿಂದನೆಯಾಗುತ್ತದೆ ಎಂದು ಕೆಲವು ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿತ್ತು. ಅಲ್ಪಸಂಖ್ಯಾತ ಶಾಲೆಗಳನ್ನು ಸರಿಯಾಗಿ ಗುರುತಿಸದೆ ಇರುವುದೇ ನ್ಯಾಯಾಂಗ ನಿಂದನೆಯಾಗುತ್ತದೆ. ಸರ್ಕಾರದ್ದೇ ತಪ್ಪು ಇರುವಾಗ ಖಾಸಗಿ ಶಾಲೆಗಳನ್ನು ದೂರುವುದು ಸರಿಯಲ್ಲ. ಅಲ್ಪಸಂಖ್ಯಾತ ಶಾಲೆಗಳ ಕುರಿತ ರಾಜ್ಯ ಸರ್ಕಾರದ ಇತ್ತೀಚಿನ ಆದೇಶ ಸಹ ಪರಿಪೂರ್ಣವಾಗಿಲ್ಲ~ ಎಂದು ಕುಸ್ಮಾ ಅಧ್ಯಕ್ಷ ಜಿ.ಎಸ್.ಶರ್ಮ ದೂರಿದರು.

`ಕುಸ್ಮಾ ಪ್ರತಿಭಟನೆ ನ್ಯಾಯಯುತ ಹಾಗೂ ಸಂವಿಧಾನಬದ್ಧವಾದುದು. ಪ್ರತಿಭಟನೆ ನಡೆಸುವ ಹಕ್ಕು ಸಂಘಟನೆಗೆ ಇದೆ. ಕಾಯ್ದೆಯ ಅನುಷ್ಠಾನದ ವೈಫಲ್ಯದ ವಿರುದ್ಧ ನ್ಯಾಯಯುತವಾಗಿ ಪ್ರತಿಭಟನೆ ನಡೆಸುವ  ಶಾಲೆಗಳಿಗೆ ನೋಟಿಸ್ ನೀಡಿ ಮುಚ್ಚುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಇಂತಹ ನೋಟಿಸ್ ಹಾಗೂ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಸಂಘಟನೆ ವ್ಯಾಪ್ತಿಯ 1800 ಶಾಲೆಗಳಲ್ಲಿ ಬಂದ್ ನಡೆಸಲಾಗುವುದು~ ಎಂದು ಅವರು ಸ್ಪಷ್ಟಪಡಿಸಿದರು.

`ಕಾಯ್ದೆ ಅನುಷ್ಠಾನದಲ್ಲಿ ಹಲವು ಬಗೆಯ ಗೊಂದಲಗಳು ಇವೆ. ಹಿಂದುಳಿದ ವಿದ್ಯಾರ್ಥಿಯ ಶಾಲಾ ಶುಲ್ಕವಾಗಿ ಖಾಸಗಿ ಶಾಲೆಗಳಿಗೆ ವರ್ಷಕ್ಕೆ 11,848 ರೂಪಾಯಿ ಪಾವತಿಸುವುದಾಗಿ ರಾಜ್ಯ ಸರ್ಕಾರ ಕಾಯ್ದೆಯ ಮಾರ್ಗಸೂಚಿಯಲ್ಲಿ ತಿಳಿಸಿತ್ತು. ಕಳೆದ ಬಾರಿ ಬ್ಯಾಲೆನ್ಸ್ ಶೀಟ್ ಪ್ರಕಾರ ವಿದ್ಯಾರ್ಥಿ ಶುಲ್ಕ ಪಾವತಿಸಲಾಗುವುದು ಎಂಬುದಾಗಿ ಹೇಳಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ವಾರ್ಷಿಕ ಶುಲ್ಕ ಐದು ಸಾವಿರ ಇದ್ದರೆ ಮತ್ತೆ ಕೆಲವು ಕಾಲೇಜುಗಳಲ್ಲಿ 20,000 ರೂಪಾಯಿ ಇದೆ. ಶಾಲಾ ಶುಲ್ಕ 11,848 ರೂಪಾಯಿಗಿಂತ ಜಾಸ್ತಿ ಇದ್ದರೆ ಹೆಚ್ಚುವರಿ ಮೊತ್ತವನ್ನು ಸರ್ಕಾರ ನೀಡುವುದಿಲ್ಲ. ಕಳೆದ ವರ್ಷದ ಶುಲ್ಕದಷ್ಟೇ ಈ ಬಾರಿಯೂ ಶುಲ್ಕ ಪಾವತಿಸಿದರೆ ಖಾಸಗಿ ಶಾಲೆಗಳಿಗೆ ಅನ್ಯಾಯವಾಗುತ್ತದೆ~ ಎಂದು ಸಂಘದ ಕಾರ್ಯದರ್ಶಿ ಎ.ಮರಿಯಪ್ಪ ದೂರಿದರು.

 `ಸಾರ್ವಜನಿಕರನ್ನು ಖಾಸಗಿ ಶಾಲೆಗಳ ವಿರುದ್ಧ ಎತ್ತಿ ಕಟ್ಟುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಕಾನೂನಿನಲ್ಲಿ ಗೊಂದಲ ಇದೆ. ಕಾಯ್ದೆ ಅನುಷ್ಠಾನದ ವಿರುದ್ಧ ಶೀಘ್ರದಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು~ ಎಂದರು.

ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್ ಹಾಗೂ ಕಾರ್ಯದರ್ಶಿ ಸೂಡಿ ಸುರೇಶ್, `ಕುಸ್ಮಾ ನಡೆಸಲು ಉದ್ದೇಶಿಸಿರುವ ಬಂದ್‌ಗೆ ನಮ್ಮ ಬೆಂಬಲ ಇಲ್ಲ. ಆದರೆ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ಇದೆ. ಶಿಕ್ಷಣ ಸಚಿವರನ್ನು ಶೀಘ್ರದಲ್ಲಿ ಭೇಟಿ ಮಾಡಿ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಗುವುದು. ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು~ ಎಂದು ಎಚ್ಚರಿಸಿದರು.

`ವಿದ್ಯಾರ್ಥಿ ಶುಲ್ಕ ಪಾವತಿಯಲ್ಲೂ ಅನ್ಯಾಯವಾಗುತ್ತಿದೆ. ಕೆಲವು ಶಾಲೆಗಳಿಗೆ ಹಿಂದುಳಿದ ವಿದ್ಯಾರ್ಥಿಗಳೇ ಬಂದಿಲ್ಲ. ರಾಜ್ಯ ಸರ್ಕಾರವನ್ನು ನಂಬಿ ಶೇ 25 ಸೀಟು ಖಾಲಿ ಬಿಟ್ಟ ಶಾಲೆಗಳಿಗಾದ ಅನ್ಯಾಯವನ್ನು ತುಂಬಿ ಕೊಡುವವರು ಯಾರು?~ ಎಂದು ಅವರು ಪ್ರಶ್ನಿಸಿದರು.

ಮಾನ್ಯತೆ ಪಡೆದ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಂಘಟನೆಯ ಕಾರ್ಯದರ್ಶಿ ಕೆ.ಎಸ್.ಕೃಷ್ಣ ಅಯ್ಯರ್, `ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳ ಶುಲ್ಕವನ್ನು ಸೆಪ್ಟೆಂಬರ್‌ನಲ್ಲಿ ಪಾವತಿಸುವುದಾಗಿ ಸರ್ಕಾರ ತಿಳಿಸಿದೆ. ಇಲ್ಲೂ ಖಾಸಗಿ ಶಾಲೆಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಈಗ ಶಿಕ್ಷಕರ ವೇತನ, ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಖಾಸಗಿ ಶಾಲೆಯವರು ಸಾಲ ಮಾಡಬೇಕಾದ ಸ್ಥಿತಿ ಇದೆ~ ಎಂದರು.

`ಕನ್ನಡ ಶಾಲೆ ಎಂದು ಮಾನ್ಯತೆ ಪಡೆದು ಇಂಗ್ಲಿಷ್ ಮಾಧ್ಯಮವನ್ನು ಬೋಧನೆ ಮಾಡುತ್ತಿರುವ ಶಾಲೆಗಳಿಗೆ ಸರ್ಕಾರ ಶುಲ್ಕವನ್ನು ಪಾವತಿಸಬಾರದು. ಇದರಿಂದಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನ್ಯಾಯವಾಗಲಿದೆ~ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.