ADVERTISEMENT

ಪ್ರತಿಭಟನೆ ಸಾಕು, ಸಾಹಿತ್ಯ ಬೇಕು

ಮೆರವಣಿಗೆ ನಡೆಸಿದಾಕ್ಷಣ ಕನ್ನಡ ಭಾಷೆ ಉಳಿವು ಸಾಧ್ಯವಿಲ್ಲ: ಸುಮತೀಂದ್ರ ನಾಡಿಗ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ಬೆಂಗಳೂರು: `ಕೆಂಪು ಮಿಶ್ರಿತ ಹಳದಿ ಪಟ್ಟೆ ತೊಟ್ಟು ಮೆರವಣಿಗೆ ನಡೆಸಿದಾಕ್ಷಣ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ. ಅಬ್ಬರದ ಪ್ರತಿಭಟನೆಯನ್ನು ಕೈಬಿಟ್ಟು , ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಬೇಕು' ಎಂದು ಹಿರಿಯ ಸಾಹಿತಿ ಸುಮತೀಂದ್ರ ನಾಡಿಗ ಅಭಿಪ್ರಾಯಪಟ್ಟರು.

ಸಪ್ನಾ ಪ್ರಕಾಶನವು ನಗರದಲ್ಲಿ ಅರಮನೆ ಮೈದಾನದ `ಪುಸ್ತಕೋತ್ಸವ'ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಹಿತಿಗಳೊಡನೆ ಮುಖಾಮುಖಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಕನ್ನಡ ಭಾಷೆಯಲ್ಲಿ ಪ್ರಮುಖವಾಗಿ ಶಿಶುಪ್ರಾಸವನ್ನು ಬರೆಯುವ ಮೂಲಕ ಭಾಷಾ ಬೇರನ್ನು ಗಟ್ಟಿಗೊಳಿಸಬೇಕು. ಪುಖಾಂನುಪುಂಖ ಭಾಷಣ ಮಾಡಿದರೆ ಭಾಷೆ ಉಳಿಯದು, ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ನಡೆಯಬೇಕು ಎಂದು ತಾಕೀತು ಮಾಡುವ ಬದಲು ಎಳೆಯರನ್ನು ಆಕರ್ಷಿಸುವ ಭಾಷೆಯ ನಾದಸಂಪತ್ತನ್ನು ಹೆಚ್ಚಿಸಿ' ಎಂದು ಹೇಳಿದರು.

`ನಾದ ಮತ್ತು ಲಯಬದ್ಧ ಆಗಿರುವುದರಿಂದಲೇ ಇಂದಿಗೂ ಬೇಂದ್ರೆಯ ಕಾವ್ಯ ಜನರ ನಾಲಿಗೆಯ ಮೇಲೆ ನಲಿದಾಡುತ್ತಿದೆ. ಬಹುಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಿರಿಯರು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವುದು ಸಂತೋಷದ ವಿಚಾರ. ಆದರೆ ಹಿರಿಯ ಸಾಹಿತಿಗಳ ಮಾರ್ಗದರ್ಶನ ಪಡೆಯಲು ಹಿಂಜರಿಯಬಾರದು' ಎಂದು ಸಲಹೆ ನೀಡಿದರು.

`ಗ್ರಂಥಾಲಯಗಳನ್ನು ಭರ್ತಿ ಮಾಡುವ ಸಲುವಾಗಿ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶನಗಳಿಗೆ ನಿರ್ಬಂಧ ಹೇರಬೇಕು. ಉತ್ತಮ ಅಭಿರುಚಿಯುಳ್ಳ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶನಗಳಿಗೆ ಸರ್ಕಾರ ಧನಸಹಾಯ ನೀಡಬೇಕು, ಆಗ ಮಾತ್ರ ಬೇನಾಮಿ ಪ್ರಕಾಶಕರ ಪ್ರವೃತ್ತಿಗೆ ಕಡಿವಾಣ ಹಾಕಬಹುದು' ಎಂದು ಕಿವಿಮಾತು ಹೇಳಿದರು.

`ಇದೇ ಮೈದಾನದಲ್ಲಿ ನಡೆದ `ಸಾಹಿತ್ಯೋತ್ಸವ'ದ ಬಗ್ಗೆ ನನಗೆ ಸ್ವಲ್ಪ ಅಸಮಾಧಾನವಿದೆ. ಆದರೆ ಪುಸ್ತಕೋತ್ಸವವೂ ಖುಷಿ ನೀಡಿದೆ. ಕೋಲ್ಕತ್ತದಲ್ಲಿ ಈಚೆಗೆ ನಡೆದ ಪುಸ್ತಕೋತ್ಸವಕ್ಕೆ ಭೇಟಿ ನೀಡಿದ್ದೆ. ಅದು ಅಕ್ಷರಶ ಅಕ್ಷರ ಜಾತ್ರೆ. ಬಂಗಾಳದ ಜನ ಭಾಷೆ ಹಾಗೂ ಪುಸ್ತಕಗಳನ್ನು ಬಹಳ ಪ್ರೀತಿಸುತ್ತಾರೆ. ಅಂತಹದ್ದೊಂದು ಅಭಿಮಾನವನ್ನು ಕನ್ನಡಿಗರು ಕಲಿಯಬೇಕು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.