ADVERTISEMENT

ಪ್ರತ್ಯೇಕ ಅಪಘಾತ- ಮೂರು ಸಾವು

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:45 IST
Last Updated 7 ಜನವರಿ 2012, 19:45 IST

ಬೆಂಗಳೂರು: ನಗರದ ಪೀಣ್ಯ, ಯಲಹಂಕ ಮತ್ತು ಕುಮಾರಸ್ವಾಮಿಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ತುಮಕೂರು ರಸ್ತೆಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ. ನೆಲಗದರನಹಳ್ಳಿ ನಿವಾಸಿ ರಮೇಶ್ (32) ಮೃತಪಟ್ಟವರು.

ಮೂಲತಃ ಹಾಸನ ಜಿಲ್ಲೆಯ ರಮೇಶ್ ಪೇಂಟರ್ ಆಗಿದ್ದರು. ಅಯ್ಯಪ್ಪ ಮಾಲಾಧಾರಿಯಾಗಿದ್ದ ಅವರು ಸ್ನೇಹಿತರಾದ ರಾಜಪ್ಪ ಮತ್ತು ರವಿಕುಮಾರ್ ಎಂಬುವರ ಜತೆ ಬೆಳಗಿನ ಜಾವ ಬೈಕ್‌ನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬೈಕ್ ಚಾಲನೆ ಮಾಡುತ್ತಿದ್ದ ರಾಜಪ್ಪ ತುಮಕೂರು ರಸ್ತೆಯಲ್ಲಿ ತಿರುವು ಪಡೆದುಕೊಳ್ಳುತ್ತಿದ್ದಾಗ ಎದುರುಗಡೆಯಿಂದ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ರಮೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ರಾಜಪ್ಪ ಮತ್ತು ರವಿಕುಮಾರ್ ಸಹ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ. ಬಸ್ ಮೆಜೆಸ್ಟಿಕ್‌ನಿಂದ ನೆಲಮಂಗಲಕ್ಕೆ ಹೋಗುತ್ತಿತ್ತು. ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಾರಸ್ವಾಮಿಲೇಔಟ್: ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೆ.ಪಿ.ನಗರ ಮುಖ್ಯರಸ್ತೆಯ ಜಂಬೂಸವಾರಿದಿಣ್ಣೆ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ. ಜೆ.ಪಿ.ನಗರ ನಿವಾಸಿ ರಾಜೀವ್‌ಮಲ್ಲೇಶ್ (25) ಸಾವನ್ನಪ್ಪಿದವರು. ಅವರು ಮಾರತ್‌ಹಳ್ಳಿಯ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು.

ಬೈಕ್‌ನಲ್ಲಿ ಹೋಗುತ್ತಿದ್ದ ಅವರು ಬಿಎಂಟಿಸಿ ಬಸ್ ಅನ್ನು ಹಿಂದಿಕ್ಕುವ ಯತ್ನದಲ್ಲಿ, ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಬೈಕ್‌ಗೆ ವಾಹನ ಗುದ್ದಿಸಿದ್ದಾರೆ. ಈ ವೇಳೆ ಕೆಳಗೆ ಬಿದ್ದ ಅವರ ಮೇಲೆ ಅದೇ ಬಸ್‌ನ ಹಿಂದಿನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕುಮಾರಸ್ವಾಮಿಲೇಔಟ್ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣ: ಬಾಗಲೂರು ಕ್ರಾಸ್ ಬಳಿ ಶುಕ್ರವಾರ ರಾತ್ರಿ ಕಾಂಕ್ರಿಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದು ಲಕ್ಷ್ಮಣ್ ಮಾಥೂರ್ (49) ಎಂಬುವರು ಮೃತಪಟ್ಟಿದ್ದಾರೆ.

ಜಾರ್ಖಂಡ್ ಮೂಲದ ಲಕ್ಷ್ಮಣ್ ಕೂಲಿ ಕಾರ್ಮಿಕರಾಗಿದ್ದರು. ತಾತ್ಕಾಲಿಕ ಶೆಡ್‌ನಲ್ಲಿ ವಾಸವಿದ್ದ ಅವರು ಬಾಗಲೂರು ಕ್ರಾಸ್ ಬಳಿ ನಡೆಯುತ್ತಿರುವ ಅಂಡರ್‌ಪಾಸ್ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಲಾರಿ ಚಾಲಕ, ವಾಹನದ ಹಿಂಬದಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಅವರನ್ನು ಗಮನಿಸದೆ ಹಿಮ್ಮುಖವಾಗಿ ವಾಹನ ಚಾಲನೆ ಮಾಡಿದ್ದಾನೆ. ಈ ವೇಳೆ ಲಾರಿಯ ಚಕ್ರದ ಕೆಳಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.        ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು           ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.