ADVERTISEMENT

ಪ್ರಥಮದರ್ಜೆ ಸಹಾಯಕಿ ಅಮಾನತು

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:34 IST
Last Updated 25 ಜೂನ್ 2013, 19:34 IST

ಬೆಂಗಳೂರು: ಬಿಬಿಎಂಪಿ ಸದಸ್ಯ ಧನರಾಜ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪ್ರಥಮದರ್ಜೆ ಸಹಾಯಕಿ ಸುಧಾಮಣಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಮಂಗಳವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

`ಚಿಕ್ಕಪೇಟೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಧಾಮಣಿ ಕಳೆದ 3  ವರ್ಷಗಳಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ. ಮನಸ್ಸಿಗೆ ತೋಚಿದಾಗ ಕಚೇರಿಗೆ ಬಂದು ಸಹಿ ಹಾಕಿ ಹೋಗುತ್ತಾರೆ. ಈ ಕುರಿತು ವಿಚಾರಿಸಿದರೆ ನನಗೆ ಬೆದರಿಕೆ ಹಾಕುತ್ತಾರೆ' ಎಂದು ಧನರಾಜ್ ತಿಳಿಸಿದರು.

`ಅವರಿಗೆ ಓದಲು, ಬರೆಯಲು ಬರುವುದಿಲ್ಲ. ಹೀಗಿದ್ದೂ ವ್ಯವಸ್ಥಾಪಕಿ ಆಗಿದ್ದಾರೆ. ಕಚೇರಿಗೆ ಸಹಿ ಹಾಕಲು ಬಂದಿದ್ದ ಅವರನ್ನು ನಾನೊಮ್ಮೆ ಪ್ರಶ್ನಿಸಿದಾಗ, ಸ್ಕೂಟರ್ ಮೇಲೆ ಹೊರಟಿದ್ದ ನನ್ನನ್ನು ಆಟೊದಲ್ಲಿ ಅಟ್ಟಿಸಿಕೊಂಡು ಬಂದು ಬಾಯಿಗೆ ಬಂದಂತೆ ನಿಂದಿಸಿದರು. ಪ್ರಭಾವಿಗಳ ಬೆಂಬಲದಿಂದಲೇ ಅವರು ಹೀಗೆ ವರ್ತಿಸುತ್ತಿದ್ದಾರೆ' ಎಂದು ದೂರಿದರು. `ಅವರು ವರಮಾನಕ್ಕಿಂತ ಅಧಿಕ ಆದಾಯ ಹೊಂದಿದ್ದು, ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.

`ತಕ್ಷಣ ಅಮಾನತು ಆದೇಶ ಹೊರಡಿಸಲಾಗುವುದು. ಅವರ ವಿರುದ್ಧ ವಿಚಾರಣೆಯನ್ನೂ ನಡೆಸಲಾಗುವುದು. ಅಧಿಕ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು' ಎಂದು ಆಯುಕ್ತರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.