ADVERTISEMENT

ಪ್ರಧಾನಿ ಆಕ್ಷೇಪ: ಕರ್ನಾಟಕದ್ದೇ ತಪ್ಪು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 20:30 IST
Last Updated 10 ಅಕ್ಟೋಬರ್ 2012, 20:30 IST

ಬೆಂಗಳೂರು: `ತಮಿಳುನಾಡಿಗೆ ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ನೀವೇ (ಕರ್ನಾಟಕ ಸರ್ಕಾರ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದಿರಿ. ಹೀಗಿರುವಾಗ, ನೀರಿನ ಪ್ರಮಾಣ ಕಡಿಮೆ ಮಾಡಿ ಆದೇಶಿಸುವುದು ಹೇಗೆ...?~

ಕಾವೇರಿ ನೀರು ಹಂಚಿಕೆ ಸಂಬಂಧ ಮನವಿ ಸಲ್ಲಿಸಲು ನವದೆಹಲಿಗೆ ತೆರಳಿದ್ದ ರಾಜ್ಯದ ಕಾಂಗ್ರೆಸ್ ಮುಖಂಡರ ನಿಯೋಗದ ಎದುರು ಪ್ರಧಾನಿ ಡಾ. ಮನಮೋಹನ್ ಸಿಂಗ್ ಈ ಪ್ರಶ್ನೆ ಇಟ್ಟಿದ್ದಾರೆ.

`ನೀರು ಹಂಚಿಕೆ ಸಂಬಂಧ ಪ್ರಧಾನಿಯವರೇ ಹೀಗೆ ಅಸಹಾಯಕತೆ ವ್ಯಕ್ತಪಡಿಸಿದರು~ ಎಂದು ನಿಯೋಗದ ಸದಸ್ಯರಲ್ಲಿ ಒಬ್ಬರಾಗಿದ್ದ ಶಾಸಕ ಡಿ.ಕೆ.ಶಿವಕುಮಾರ್ ಬುಧವಾರ ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

`ಕಾವೇರಿ ನದಿ ಪ್ರಾಧಿಕಾರ ಸಭೆ ಸೇರುವ ಮೊದಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿ, ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ರಾಜ್ಯ ಸರ್ಕಾರ ಹೇಳಿತು. ಸೆ.19ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಎಲ್ಲ ರಾಜ್ಯಗಳ ಅಭಿಪ್ರಾಯ ಆಲಿಸಿ, ತೀರ್ಮಾನ ಪ್ರಕಟಿಸುವ ಮೊದಲೇ ಕರ್ನಾಟಕದ ಮುಖ್ಯಮಂತ್ರಿ ಸಭಾತ್ಯಾಗ ಮಾಡಿದರು. ಹೀಗೆ ಮಾಡಿದರೆ ನ್ಯಾಯ ಒದಗಿಸುವುದು ಹೇಗೆ~ ಎಂದು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನಿ, ನಿಯೋಗವನ್ನು ಪ್ರಶ್ನಿಸಿದರು ಎಂದು ಶಿವಕುಮಾರ್ ಹೇಳಿದರು.

`ಸಭೆಯಲ್ಲಿ ಹಾಜರಿದ್ದು ಚೌಕಾಸಿ ಮಾಡಬಹುದಿತ್ತು. ಆದರೆ, ಅವರು (ಮುಖ್ಯಮಂತ್ರಿ) ರಾಜಕಾರಣ ಮಾಡಲು ಬಂದವರ ಹಾಗೆ ವರ್ತಿಸಿದರು. ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ನಾನು ರಾಜಕಾರಣ ಮಾಡಲು ಆಗುವುದಿಲ್ಲ. ಅದು ನ್ಯಾಯ ಸ್ಥಾನ. ನನಗೆ ಎಲ್ಲ ರಾಜ್ಯಗಳೂ ಒಂದೇ.

ಇದರ ನಡುವೆಯೂ ರಾಜ್ಯ ಸರ್ಕಾರ ಹೇಳಿದ್ದರಲ್ಲಿ ಒಂದು ಸಾವಿರ ಕ್ಯೂಸೆಕ್ ನೀರನ್ನು ಕಡಿಮೆ           ಮಾಡಿದ್ದೇನೆ. ಅವರು ಸಭೆಯಲ್ಲಿದ್ದು ಇನ್ನೂ ಒತ್ತಡ    ಹಾಕಿದ್ದರೆ ಅದರಲ್ಲೂ ಸ್ವಲ್ಪ ಕಡಿಮೆ ಮಾಡಬಹುದಿತ್ತು ಎಂದು ಪ್ರಧಾನಿ ಹೇಳಿದರು~ ಎಂದು ಶಿವಕುಮಾರ್     ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.