ADVERTISEMENT

ಪ್ರಮುಖ ಆರೋಪಿ ಸೆರೆ: ಸಿಐಡಿ ಕಚೇರಿಗೆ ಏಜೆಂಟರು

‘ಅಗ್ರಿ ಗೋಲ್ಡ್‌ ಕಂಪನಿ’ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:40 IST
Last Updated 22 ಮೇ 2018, 19:40 IST

ಬೆಂಗಳೂರು: ‘ಅಗ್ರಿ ಗೋಲ್ಡ್‌ ಕಂಪನಿ’ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸೀತಾರಾಮ್ ಆವಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ, ಆ ಕಂಪನಿಯ ರಾಜ್ಯದಲ್ಲಿರುವ ಏಜೆಂಟರು, ಸಿಐಡಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

‘ಅಖಿಲ ಭಾರತ ಅಗ್ರಿಗೋಲ್ಡ್ ಗ್ರಾಹಕರು ಮತ್ತು ಪ್ರತಿನಿಧಿಗಳ ಹಿತರಕ್ಷಣಾ ವೇದಿಕೆ’ ಅಧ್ಯಕ್ಷ ಅಂಡಾಳು ರಮೇಶ್ ಬಾಬು ನೇತೃತ್ವದಲ್ಲಿ ನಗರದ ಕಾರ್ಲಟನ್‌ ಕಟ್ಟಡದ ಸಿಐಡಿ ಕಚೇರಿಗೆ ಸೋಮವಾರ ಹೋಗಿದ್ದ ಏಜೆಂಟರು, ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

‘ಆಂಧ್ರಪ್ರದೇಶದ ಸಿಐಡಿ ಅಧಿಕಾರಿಗಳು ಬಂಧಿಸಿರುವ ಕಂಪನಿಯ ಉಪಾಧ್ಯಕ್ಷ ಸೀತಾರಾಮ್‌ನನ್ನು ಕಸ್ಟಡಿಗೆ ಪಡೆಯಬೇಕು. ರಾಜ್ಯದ ಗ್ರಾಹಕರಿಗೆ ವಂಚಿಸಿದ್ದ ಮಾಹಿತಿಯನ್ನು ಆತನಿಂದಲೇ ಕಲೆಹಾಕಬೇಕು’ ಎಂದು ಆಗ್ರಹಿಸಿದರು.

ADVERTISEMENT

ಅಂಡಾಳು ರಮೇಶ್ ಬಾಬು, ‘ಪ್ರಭಾವ ಬಳಸಿ ಎರಡೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಸೀತಾರಾಮ್‌ನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದು ಸ್ವಾಗತಾರ್ಹ. ಪ್ರಕರಣ ಸಂಬಂಧ ಆಂಧ್ರಪ್ರದೇಶ ಹಾಗೂ ಹೈದರಾಬಾದ್‌ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದ್ದು, ಅದರಿಂದಲೇ ಈ ಬಂಧನವಾಗಿದೆ’ ಎಂದರು.

‘1995ರಲ್ಲಿ ಸ್ಥಾಪನೆಗೊಂಡ ಕಂಪನಿಯು ರಾಜ್ಯದ 56 ಕಡೆಗಳಲ್ಲಿ ಶಾಖಾ ಕಚೇರಿ ತೆರೆದು ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿದೆ. ಆ ಮೊತ್ತ ಎಷ್ಟು ಎಂಬುದು ಇದುವರೆಗೂ ಲೆಕ್ಕಕ್ಕೆ ಸಿಕ್ಕಿಲ್ಲ. ಆರೋಪಿ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಸಿಐಡಿ ಅಧಿಕಾರಿಗಳು, ಅದನ್ನು ಪತ್ತೆ ಹಚ್ಚಬೇಕು’ ಎಂದರು.

ದಾಖಲೆ ಕೇಳಿದ ಅಧಿಕಾರಿಗಳು: ಏಜೆಂಟರ ಮನವಿ ಸ್ವೀಕರಿಸಿದ ಸಿಐಡಿ ಅಧಿಕಾರಿಗಳು, ‘ವಂಚನೆ ಕುರಿತ  ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ನಿಮ್ಮ ಬಳಿ ಮತ್ತೆ ಯಾವುದಾದರೂ ದಾಖಲೆ ಇದ್ದರೆ ನೀಡಿ’ ಎಂದಿದ್ದಾರೆ.

ಅಂಡಾಳು ರಮೇಶ್ ಬಾಬು, ‘ಅಗ್ರಿಗೋಲ್ಡ್ ಕಂಪನಿಯಿಂದ ನೀಡಿರುವ, ಬೌನ್ಸ್ ಆಗಿರುವ ಚೆಕ್‌ಗಳ ಜೆರಾಕ್ಸ್ ಪ್ರತಿ (ನೋಟರಿ ಮಾಡಿಸಿರಬೇಕು) ಮತ್ತು ಗಾರ್ಡನ್ ಸಿಟಿ ಸೈಟ್‌ನಲ್ಲಿ ಹಣ ಹೂಡಿಕೆ ಮಾಡಿದ್ದರ ಬಗ್ಗೆ ರಶೀದಿ, ನೋಂದಣಿ ಪತ್ರ ಹಾಗೂ ಆಧಾರ್ ಸಂಖ್ಯೆ ನೀಡುವಂತೆ ಅಧಿಕಾರಿಗಳು ಕೇಳಿದ್ದಾರೆ’ ಎಂದರು.

‘ಫಾರ್ಚ್ಯೂನ್‌ ಸೀತಾರಾಮ ವೆಂಚರ್ಸ್‌ನಲ್ಲಿ ಹಣ ಕಟ್ಟಿರುವ ರಶೀದಿ, ವಂಚನೆಗೂ ಮುನ್ನ ನಾಲ್ಕು ತಿಂಗಳು ಹಣ ಪಾವತಿ ಮಾಡಿದ್ದಕ್ಕೆ ನೀಡಿರುವ ರಶೀದಿಯನ್ನೂ ನೀಡುವಂತೆ ತಿಳಿಸಿದ್ದಾರೆ. ರಾಜ್ಯದ ಪ್ರತಿಯೊಬ್ಬ ಏಜೆಂಟರು, ಮೇ 27ರೊಳಗೆ ಬಿಎಂಎಸ್‌ ಕಚೇರಿಗೆ ದಾಖಲೆಗಳನ್ನು ತಲುಪಿಸಬೇಕು. ಅವುಗಳನ್ನೇ ಅಧಿಕಾರಿಗಳಿಗೆ ನೀಡಲಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.