ADVERTISEMENT

ಪ್ರಾಂಶುಪಾಲರ ವಿರುದ್ಧ ತನಿಖೆ- ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:15 IST
Last Updated 7 ಫೆಬ್ರುವರಿ 2011, 19:15 IST

ಬೆಂಗಳೂರು: ‘ನೀನು ನನ್ನ ಪತ್ನಿಯಂತೆಯೇ ಕಾಣುತ್ತೀಯ- ನಿನ್ನ ಮೇಲೆ ನನಗೆ ಆಸೆಯಾಗಿದೆ, ‘ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾನು ನಿಮ್ಮ ಮನೆಗೆ ಬರುತ್ತೇನೆ’, ‘ನಿನ್ನ ಜೊತೆ ಕೆಲಸ ಮಾಡುವುದೆಂದರೆ ನನಗೆ ಬಹಳ ಇಷ್ಟ- ನಿನ್ನ ಪಕ್ಕದಲ್ಲಿಯೇ ನಾನು ಕುಳಿತುಕೊಳ್ಳುತ್ತೇನೆ...’

- ಹೀಗೆ ಅಸಭ್ಯವಾಗಿ ಮಾತನಾಡುವುದೂ ಅಲ್ಲದೇ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನಗರದ ಕಾಲೇಜೊಂದರ ಪ್ರಾಂಶುಪಾಲರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೋಮವಾರ ನಿರ್ದೇಶಿಸಿದೆ.

ಮಹಿಳಾ ಉಪನ್ಯಾಸಕರ ಮುಂದೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡುವ ಆರೋಪ ಹೊತ್ತ ಈ ವ್ಯಕ್ತಿ, ನಗರದ ಶೇಷಾದ್ರಿ ರಸ್ತೆಯಲ್ಲಿನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಂ. ಅಭಿಲಾಷ್. ಇವರ ಮೇಲಿನ ಆರೋಪಗಳ ಕುರಿತು ಮೂರು ತಿಂಗಳಿನಲ್ಲಿ ತನಿಖೆ ಪೂರ್ಣಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.

ಇವರ ವಿರುದ್ಧ ಕಾಲೇಜಿನ ಉಪನ್ಯಾಸಕಿಯೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಅರ್ಜಿದಾರ ಮಹಿಳೆ ಸೇರಿದಂತೆ ಇತರ ಉಪನ್ಯಾಸಕಿಯರು ನೀಡಿರುವ ದೂರಿನ ಆಧಾರದ ಮೇಲೆ ಸಮಿತಿಯನ್ನು ಸರ್ಕಾರ ರಚಿಸಿದ್ದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಲು ಕೋರ್ಟ್ ಹೇಳಿದೆ.

‘ಸಿಎಂ, ಸಚಿವ ಎಲ್ಲರೂ ಗೊತ್ತು’
ಲೈಂಗಿಕ ಕಿರುಕುಳದ ಬಗ್ಗೆ ಉನ್ನತ ಅಧಿಕಾರಿಗಳಲ್ಲಿ ದೂರು ದಾಖಲಿಸುವುದಾಗಿ ಉಪನ್ಯಾಸಕಿಯರು ಹೇಳಿದರೆ, ಅವರು, ‘ನನಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಅರವಿಂದ ಲಿಂಬಾವಳಿ ಎಲ್ಲರೂ ಸ್ನೇಹಿತರು. ಅಷ್ಟೇ ಅಲ್ಲದೇ ನಾನು ಪರಿಶಿಷ್ಟ ಜಾತಿಗೆ ಸೇರಿದ್ದೇನೆ. ಈ ಹಿನ್ನೆಲೆಯಲ್ಲಿ ಯಾರ ಮುಂದೆ ಏನು ದೂರಿದರೂ ಪ್ರಯೋಜನ ಇಲ್ಲ’ ಎಂದು ಹೇಳುತ್ತಿದ್ದ ಕಾರಣ ಮಹಿಳೆಯರು ಯಾರ ಮುಂದೆಯೂ ದೂರಲು ಹೆದರುತ್ತಿದ್ದರು ಎನ್ನುವುದಾಗಿ ಅರ್ಜಿದಾರರು ತಿಳಿಸಿದ್ದಾರೆ.

‘ಆದರೂ ಧೈರ್ಯ ಮಾಡಿ ನಾನು ರಾಜ್ಯ ಮಹಿಳಾ ಆಯೋಗ ಹಾಗೂ ಉನ್ನತ ಶಿಕ್ಷಣ ಸಚಿವರಲ್ಲಿ ಕಳೆದ ವರ್ಷ ದೂರು ದಾಖಲಿಸಿದ್ದರೂ ಪ್ರಯೋಜನ ಆಗಲಿಲ್ಲ. ನಂತರ ಕೆಲ ಮಹಿಳೆಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಅಭಿಲಾಷ್ ಅವರನ್ನು ಬಂಧಿಸಲಾಗಿತ್ತು. ಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಆದರೆ ಇಂತಹ ಕೃತ್ಯ ಮುಂದುವರಿಸದಂತೆ ಆದೇಶಿಸಿತ್ತು. ಆದರೆ ಪುನಃ ಪ್ರಾಂಶುಪಾಲರಾಗಿ ಮುಂದುವರಿದ ಅವರು ಹಿಂದಿನ ಚಾಳಿಯನ್ನೇ ಮುಂದುವರಿಸಿದ್ದಾರೆ. ಇದರಿಂದ ಉಪನ್ಯಾಸಕಿಯರ ಪಾಡು ಹೇಳತೀರದಾಗಿದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.