ಬೆಂಗಳೂರು: ‘ಪ್ರಾಚೀನ ಹಾಗೂ ಸಮೃದ್ಧವಾದ ಪ್ರಾಕೃತ ಭಾಷೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಬೇಕು’ ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಒತ್ತಾಯಿಸಿದರು.
ಸಕಲ ಜೈನ ಸಮಾಜವು ಕರ್ನಾಟಕ ಜೈನ ಅಸೋಸಿಯೇಷನ್ ಸಹಯೋಗದೊಂದಿಗೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
‘ದೇಶದಲ್ಲಿ 14 ಸಂಸ್ಕೃತ ವಿಶ್ವವಿದ್ಯಾ-ಲಯಗಳಿವೆ. ಶ್ರೀಸಾಮಾನ್ಯರಲ್ಲಿ ಬಳಕೆಯಲ್ಲಿದ್ದ ಪ್ರಾಕೃತ ಭಾಷೆಯ ವಿಶ್ವವಿದ್ಯಾಲಯವೂ ರಾಜ್ಯದಲ್ಲಿ ಸ್ಥಾಪನೆಯಾಗಬೇಕು. ಈ ದಿಸೆಯಲ್ಲಿ ಸರ್ಕಾರ ಚಿಂತನೆ ನಡೆಸಬೇಕು’ ಎಂದರು.
‘ಬುದ್ಧ ಹಾಗೂ ಮಹಾವೀರರ ಬೋಧನೆಗಳು ಪ್ರಾಕೃತ ಭಾಷೆಯಲ್ಲಿದೆ. ಭಾರತೀಯ ಸಂಸ್ಕೃತಿಯ ಸಾರ ಅಡಗಿರುವ ಪ್ರಾಕೃತ ಭಾಷೆಯ ಅಧ್ಯಯನಕ್ಕೂ ವಿಶ್ವವಿದ್ಯಾಲಯದ ಅಗತ್ಯ ಎದ್ದುಕಾಣುತ್ತಿದೆ’ ಎಂದರು.
‘ಲ್ಯಾಟಿನ್, ಗ್ರೀಕ್, ಹೀಬ್ರೂ ಭಾಷೆಗಳು ಪ್ರಸ್ತುತ ವ್ಯವಹಾರಿಕ ವಲಯದಲ್ಲಿ ಅಸ್ತಿತ್ವದಲ್ಲಿ ಇಲ್ಲದೇ ಇದ್ದರೂ, ಆಸಕ್ತರು ಕಲಿಯಲು ಅವಕಾಶ ಮಾಡಿಕೊಡಲಾಗಿದೆ. ಪ್ರಾಚೀನ ಉತ್ಕೃಷ್ಟ ಗ್ರಂಥಗಳು ಪ್ರಾಕೃತ ಭಾಷೆಯಲ್ಲಿದ್ದೂ ಅವುಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಪ್ರಾಕೃತ ಭಾಷೆಯ ಅರಿವಿನ ಅಗತ್ಯವಿದೆ’ ಎಂದರು.
‘ಜೈನ ಸಮುದಾಯದವರೆಲ್ಲರೂ ಶ್ರೀಮಂತರು ಎಂಬ ತಪ್ಪು ಕಲ್ಪನೆಯಿದೆ. ವಿಜಾಪುರ, ಬಾಗಲಕೋಟೆ, ಚಿಕ್ಕೋಡಿ, ಕೋಲಾರ ಸೇರಿದಂತೆ ಗ್ರಾಮೀಣ ಪ್ರದೇಶಗಳ ಜೈನ ಸಮುದಾಯದಲ್ಲಿರುವ ಬಡವರ ಸಮಗ್ರ ಅಭಿವೃದ್ಧಿಯಾಗಬೇಕು’ ಎಂದರು.
‘ಸುಶಿಕ್ಷಿತ ಸಮುದಾಯಗಳಲ್ಲಿ ಜೈನ ಸಮುದಾಯಕ್ಕೆ ಮೊದಲ ಸ್ಥಾನ ದೊರೆಯುತ್ತದೆ. ಸಚಿವ ಕೆ.ರೆಹಮಾನ್ ಖಾನ್ ಅವರ ಪ್ರಯತ್ನದಿಂದಾಗಿ ಅಲ್ಪಸಂಖ್ಯಾತ ವರ್ಗಕ್ಕೆ ಜೈನರು ಸೇರ್ಪಡೆಗೊಂಡಿರುವುದು ಸಂತಸದ ವಿಚಾರ’ ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಕೆ.ರೆಹಮಾನ್‌ಖಾನ್, ‘ಹಲವು ವರ್ಷಗಳ ಹೋರಾಟದ ಫಲವಾಗಿ ಜೈನರು ಕೊನೆಗೂ ಅಲ್ಪಸಂಖ್ಯಾತ ಸಮುದಾಯಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ’ ಎಂದರು.
‘ಅಲ್ಪಸಂಖ್ಯಾತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಬೇಕು. ಆಗ ಮಾತ್ರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಕ್ಕೆ ಸಾರ್ಥಕವಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.