ADVERTISEMENT

ಪ್ರೆಸ್‌ಕ್ಲಬ್‌ ಆವರಣದಲ್ಲಿ ಗಂಧದ ಮರ ಕಳವು

ಸಿಸಿ ಟಿವಿ ಕ್ಯಾಮೆರಾದಲ್ಲಿ ಗೊತ್ತಾಗದ ಕಳ್ಳರ ಗುರುತು

​ಪ್ರಜಾವಾಣಿ ವಾರ್ತೆ
Published 22 ಜನವರಿ 2016, 19:46 IST
Last Updated 22 ಜನವರಿ 2016, 19:46 IST
ಕಳ್ಳರು ಕಡಿದ ಗಂಧದ ಮರದ ಬುಡವನ್ನು ಕುತೂಹಲದಿಂದ ಪರಿಶೀಲಿಸಿದ ಮಂದಿ  – ಪ್ರಜಾವಾಣಿ ಚಿತ್ರ
ಕಳ್ಳರು ಕಡಿದ ಗಂಧದ ಮರದ ಬುಡವನ್ನು ಕುತೂಹಲದಿಂದ ಪರಿಶೀಲಿಸಿದ ಮಂದಿ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರೆಸ್‌ಕ್ಲಬ್‌ ಆವರಣದಲ್ಲಿದ್ದ ಎರಡು ಗಂಧದ ಮರಗಳನ್ನು ಕಳ್ಳರು ಶುಕ್ರವಾರ ಮುಂಜಾನೆ ಕಳವು ಮಾಡಿರುವ ಘಟನೆ ನಡೆದಿದೆ.

ಕ್ಲಬ್ ದ್ವಾರದ ಎಡಭಾಗದಲ್ಲಿದ್ದ ಮರಗಳನ್ನು ಕಡಿದಿರುವ ಕಳ್ಳರು, ನಂತರ ಗೊತ್ತಾಗದಂತೆ ವಾಹನಗಳಲ್ಲಿ ಸಾಗಿಸಿದ್ದಾರೆ. ಬೆಳಿಗ್ಗೆ 8.30ರ ಸುಮಾರಿಗೆ ಕಾರ್ಮಿಕರು ಕ್ಲಬ್ ಆವರಣವನ್ನು ಸ್ವಚ್ಛಗೊಳಿಸುವಾಗ ಘಟನೆ ಬೆಳಕಿಗೆ ಬಂದಿದೆ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದರು.

ದ್ವಾರದ ಬಳಿ ರಾತ್ರಿ 2 ಗಂಟೆ ಸುಮಾರಿಗೆ ಬಂದು ಹೋಗಿದ್ದ ಕ್ಲಬ್‌ನ ಭದ್ರತಾ ಸಿಬ್ಬಂದಿ, ನಂತರ ಒಳಗಡೆ ಹೋಗಿ ಮಲಗಿದ್ದಾಗಿ ತಿಳಿಸಿದ್ದಾರೆ. ಬೆಳಗ್ಗಿನ ಜಾವ 2ರಿಂದ 4ರ ಅವಧಿಯಲ್ಲಿ ಮರಗಳನ್ನು ಕಡಿದಿರುವ ಕಳ್ಳರು, ನಂತರ ಯಾರಿಗೂ ಗೊತ್ತಾಗದಂತೆ ಕಡಿದ ಜಾಗವನ್ನು ಸೊಪ್ಪುಗಳಿಂದ ಮುಚ್ಚಿದ್ದಾರೆ ಎಂದು ಪೊಲೀಸರು ಹೇಳಿದರು.

ಸಾಮಾನ್ಯವಾಗಿ ಕ್ಲಬ್‌ನಲ್ಲಿ ಮಧ್ಯರಾತ್ರಿವರೆಗೆ ಯಾರಾದರೂ ಇದ್ದೇ ಇರುತ್ತಾರೆ. ಹಾಗಾಗಿ, ಇಲ್ಲಿಗೆ ಬರುವವರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಬಹಳ ದಿನಗಳಿಂದ ಗಮನಿಸಿರುವವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದರು.

ಘಟನೆ ಸಂಬಂಧ ಪ್ರೆಸ್‌ಕ್ಲಬ್‌ನ ಅಧ್ಯಕ್ಷರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕ್ಲಬ್ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ಅದರಲ್ಲಿನ ದೃಶ್ಯಗಳು ಅಸ್ಪಷ್ಟವಾಗಿದ್ದು, ಕಳ್ಳರ ಗುರುತು ಸರಿಯಾಗಿ ಗೊತ್ತಾಗುತ್ತಿಲ್ಲ ಎಂದು ಪೊಲೀಸರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.