ADVERTISEMENT

`ಪ್ರೋತ್ಸಾಹದಿಂದ ಕಲಾವಿದ ಬೆಳೆಯಲು ಸಾಧ್ಯ'

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 20:59 IST
Last Updated 23 ಡಿಸೆಂಬರ್ 2012, 20:59 IST

ಬೆಂಗಳೂರು: `ಕಲೆಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಕಲಾವಿದ ಬೆಳೆಯಲು ಸಾಧ್ಯ' ಎಂದು ಹಿರಿಯ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಹೇಳಿದರು.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 25ನೇ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, `ಕಲಾವಿದ ತೆರೆಯ ಮುಂದೆ ನಗಿಸುತ್ತಾರೆ, ಆದರೇ ಅವರು ಜೀವನದಲ್ಲಿ ಬಹಳ ಕಷ್ಟವನ್ನು ಅನುಭವಿಸುತ್ತಿರುತ್ತಾರೆ. ಇದು ಯಾರಿಗೂ ಗೊತ್ತಿರುವುದಿಲ್ಲ.

ಯಕ್ಷಗಾನ ಸೇರಿದಂತೆ ಅನೇಕ ಕಲೆಗಳನ್ನು ನಂಬಿಕೊಂಡಿರುವ ಹಿರಿಯ ಕಲಾವಿದರು ಅನೇಕರು ಇ್ದ್ದದಾರೆ. ಅಂತಹವರನ್ನು ಸರ್ಕಾರ, ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಬೇಕು' ಎಂದರು.ಪ್ರಶಸ್ತಿ ಮತ್ತು ಗೌರವಗಳು ಸುಮ್ಮನೆ ಸಿಗುವುದಿಲ್ಲ. ಸತತ ಅಧ್ಯಯನ ಮಾಡಿ ಪ್ರತಿಭೆಯನ್ನು ಹೊರಹೊಮ್ಮಿಸಿದಾಗ ಗೌರವ ಪ್ರಶಸ್ತಿಗಳು ದೊರೆಯುತ್ತವೆ. ಹಣದ ಹಿಂದೆ ಹೋಗಿ ತಮ್ಮ  ಪ್ರತಿಭೆಯನ್ನು ಮಾರಿಕೊಳ್ಳಲು ಮುಂದಾಗಬಾರದು' ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, `ನೂರರ ಸಂಭ್ರಮ ಆಚರಣೆಯ ಸಂದರ್ಭದಲ್ಲಿ ಬ್ಯಾಂಕಿನ ಕನ್ನಡೇತರ ಅಧಿಕಾರಿಗಳು ಕನ್ನಡ ಕಲಿಯಲು ಮುಂದಾಗಬೇಕು. ರಾಜ್ಯದ ಸಮಸ್ಯೆಗಳ ಕುರಿತು ಚಿಂತನೆಗಳನ್ನು ಮಾಡುವಂತಹ ಕೆಲಸ ನಡೆಯಬೇಕು. ಕಲಾವಿದರನ್ನು ಗೌರವಿಸುತ್ತಿರುವ ಬ್ಯಾಂಕಿನ ಕಾರ್ಯ ಶ್ಲಾಘನೀಯವಾಗಿದೆ' ಎಂದರು.

ರಂಗಭೂಮಿ ಹಾಗೂ ಕಿರುತೆರೆ ಕಲಾವಿದರಾದ ಅಕ್ಕಿ ಚನ್ನಬಸಪ್ಪ, ಶಾರದ, ಸೋಬಾನೆ ಪದ ಹಾಡುಗಾರ್ತಿ ಗೌರಮ್ಮ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶರದ್ ಶರ್ಮಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.